ಆರು ವರ್ಷಗಳ ಹಿಂದೆ ಸಮಗ್ರ ಜೀರ್ಣೋದ್ದಾರಗೊಂಡು ಹಲವಾರು ಪವಾಡಗಳಿಗೆ ಕಾರಣವಾಗಿರುವ ಬೆಳಪು ಗ್ರಾಮದ ಪಣಿಯೂರು ರೈಲ್ವೆ ನಿಲ್ದಾಣ ಬಳಿಯಿರುವ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಮತ್ತೊಂದು ಕಾರಣಿಕತೆಗೆ ಸಾಕ್ಷಿಯಾಗಿದೆ.
ಮೇ 18 ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ಕಣ್ಮರೆಯಾಗಿದ್ದ ನಾಂಜಾರು ಸಾನದ ಮನೆಯ ಮಗುವೊಂದರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮೇ 27 ರಂದು ಬೆಳಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗ ಉರಿಯುತ್ತಿರುವ ಕಾಲುದೀಪಕ್ಕೆ ಸುತ್ತಿಕೊಂಡಂತೆ ಪತ್ತೆಯಾಗಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಪಡುಬಿದ್ರಿಯ ಮದುವೆ ಸಮಾರಂಭದಲ್ಲಿ ತಂದೆ-ತಾಯಿ, ಅಜ್ಜಿಯ ಜೊತೆಗೆ ಇದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮಧ್ಯಾಹ್ನ ಬಳಿಕ ಕಾಣೆಯಾಗಿತ್ತು. ಎಲ್ಲಾ ಕಡೆಗಳಲ್ಲಿ ಹುಡುಕಾಡಿದ ಬಳಿಕ ಚಿನ್ನದ ಸರ ಕಣ್ಮರೆಯಾಗಿರುವ ಬಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ಮತ್ತು ಪರಿವಾರ ಶಕ್ತಿಗಳಿಗೆ ಕೈ ಮುಗಿದು, ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೊರಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದ್ದರು.
ಚಿನ್ನದ ಸರ ಕಾಣೆಯಾದ 10 ದಿನಗಳ ಬಳಿಕ ಶುಕ್ರವಾರ ಬೆಳಗ್ಗೆ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿರುವ ದೀಪಕ್ಕೆ ಎಣ್ಣೆ ಹಾಕಲೆಂದು ಬಂದಿದ್ದ ಸಾನದ ಮನೆಯ ಪ್ರತಿನಿಧಿಗಳಿಗೆ ಕಾಲು ದೀಪದಲ್ಲಿ ಚಿನ್ನದ ಸರ ಇರುವುದು ಬೆಳಕಿಗೆ ಬಂದಿದೆ.
ಸರ ಕಳೆದುಕೊಂಡಿದ್ದ ಮನೆಯವರು ಬಂದು ಪರಿಶೀಲಿಸಿದಾಗ ಅದು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವಾಗಿದ್ದು, ಕೂಡಲೇ ಮಗುವಿನ ತಾಯಿಗೆ ವಿಷಯ ಮುಟ್ಟಿಸಿದರು. ತಾಯಿ ಕೂಡ ಸರ ತನ್ನದೇ ಮಗುವಿನದ್ದೆಂದು ಧೃಡಪಡಿಸಿದ್ದಾರೆ. ಧರ್ಮ ಜಾರಂದಾಯನ ಕೃಪೆಯಿಂದಲೇ ಕಳೆದು ಹೋಗಿದ್ದ ಚಿನ್ನದ ಸರ ಮರಳಿ ದೊರಕಿದೆ ಎನ್ನಲಾಗಿದೆ.
Kshetra Samachara
28/05/2022 11:16 am