ಕಾರ್ಕಳ : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಾದ ಮಾನ್ಯ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವ ಸಚಿವ ಸುನಿಲ್ ಕುಮಾರ್ ಭ್ರಷ್ಟಾಚಾರ ದಾಖಲೆ ಬಹಿರಂಗಪಡಿಸಬೇಕು ಇಲ್ಲವೇ ಕ್ಷಮೆಯಾಚಿಸಬೇಕು ತಪ್ಪಿದ್ದಲ್ಲಿ ಪೇ ಸಿಎಂ ಮಾದರಿಯಲ್ಲಿ ಸುನಿಲ್ ಪೇ ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರವರು ಈ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಯಾವುದೇ ಲೋಪಗಳಿಲ್ಲದ ಭ್ರಷ್ಟಾಚಾರರಹಿತ ಪೂರ್ಣ ಅವಧಿಯ ಆಡಳಿತ ನೀಡಿದ ಹೆಗ್ಗಳಿಕೆ ಅವರದ್ದು, ಅವರ ಜನಪರ ಯೋಜನೆಗಳಿಂದ ಕೋಟ್ಯಾಂತರ ಜನರು ನೆಮ್ಮದಿಯ ಬದುಕು ಬದುಕ್ಕಿದ್ದಾರೆ, ಅಂತವರನ್ನು ನೀವು ಮಾದರಿಯಾಗಿ ಸ್ವೀಕರಿಸಬೇಕೇ ಹೊರತು ಆದಾರ ರಹಿತ ಅರೋಪ ಮಾಡುವುದಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
"ತಾನು ಕಳ್ಳ ಪರರ ನಂಬ" ಎನ್ನುವ ಗಾದೆ ಮಾತಿನಂತೆ ನೀವು ಸಚಿವರಾದ ಮೇಲೆ ಮುಖ್ಯಮಂತ್ರಿಯವರಿಗೂ ಗ್ರಹಚಾರ ಪ್ರಾರಂಭವಾಗಿದೆ ಅಂದಿನಿಂದಲೇ ರಾಜ್ಯ ಸರಕಾರದ ಮೇಲೆ ಗಂಭೀರ ಆರೋಪಗಳು ಬರಲು ಪ್ರಾರಂಭವಾಯಿತು, ನಿಮ್ಮದೇ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಜಗಜ್ಜಾಹಿರವಾಗಿದೆ ಮೊದಲು ಆ ಬಗ್ಗೆ ತನಿಖೆ ನಡೆಸಿ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಸ್ತುತ ಈಗ ನಿಮ್ಮ ಆಸ್ತಿಯ ಮೌಲ್ಯ ಎಷ್ಟು ಮತ್ತು ಅದರ ಮೂಲ ಯಾವುದೆಂದು ನಿಮಗೇ ಗೊತ್ತಿದ್ದರೆ ಬಹಿರಂಗಪಡಿಸಿ, ಒಂದು ವೇಳೆ ಎಲ್ಲವನ್ನು ಹೇಳಲು ಅಸಾದ್ಯವಾದರೆ ನಮಗೆ ಗೊತ್ತಿದ್ದ ಕೆಲವನ್ನು ನೆನಪಿಸುವ ಪ್ರಯತ್ನ ಮಾಡುತ್ತೇವೆ. ಆಗ ಭ್ರಷ್ಟಾಚಾರ ಪಿತಾಮಹ ಯಾರೆಂದು ಕ್ಷೇತ್ರದ ಜನರೇ ತೀರ್ಮಾನಿಸುತ್ತಾರೆ. ಕಾರ್ಕಳದ ಯಾವೊಬ್ಬ ರಾಜಕಾರಣಿಯೂ ನಿಮ್ಮಷ್ಟು ಗಂಬೀರ ಅರೋಪವನ್ನು ಎದುರಿಸಿಲ್ಲ ಇದು ಕ್ಷೇತ್ರದ ಜನರ ದೌರ್ಭಾಗ್ಯ .
ಈ ಹಿಂದೆ ಹಲವು ಬಾರಿ ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಿಡುಗಡೆಗೊಳಿಸಿದ್ದೇವೆ ಯಾವುದಕ್ಕೂ ಉತ್ತರಿಸುವ ಧೈರ್ಯ ನಿಮಗಿಲ್ಲ. ನಾವು ಮಾಡಿದ ಆರೋಪಕ್ಕೆ ಇನ್ನೂ ಬದ್ದರಿದ್ದೇವೆ ಸವಾಲನ್ನು ಸ್ವೀಕರಿಸುವ ದೈರ್ಯ ನಿಮಗಿದೆಯೇ ಎಂದು ಸವಾಲು ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾವು ನಮ್ಮ ಪಕ್ಷ ಮತ್ತು ಪಕ್ಷದ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದೀರಿ. ಅಧಿಕಾರ ಶಾಶ್ವತವಲ್ಲ ಜವಾಬ್ದಾರಿ ಸ್ಥಾನದಲ್ಲಿರುವವರ ಭಾಷೆ ಹಿಡಿತದಲ್ಲಿದ್ದರೆ ಒಳ್ಳೆಯದು ಇಲ್ಲವಾದರೆ ನಿಮ್ಮ ಧಾಟಿಯಲ್ಲಿ ಉತ್ತರಿಸಲು ನಾವೂ ಸಿದ್ದರಿದ್ದೇವೆ ಎಂದು ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧಾಕರ್ ಶೆಟ್ಟಿ, ಮಾಳ ಪಂಚಾಯತ್ ಮಾಜಿ ಅದ್ಯಕ್ಷ ಅಜಿತ್ ಹೆಗ್ಡೆ, ಯುವ ಕಾಂಗ್ರೆಸ್ ಅದ್ಯಕ್ಷ ಯೋಗೀಶ್ ಇನ್ನಾ ಉಪಸ್ಥಿತರಿದ್ದರು.
Kshetra Samachara
26/09/2022 09:38 pm