ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಮಾಜಿ ಸಚಿವ ,ಮೀನುಗಾರ ಮುಖಂಡ ಪ್ರಮೋದ್ ಮಧ್ವರಾಜ್ ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿದ್ದು ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹಳೆಯದು.ಬಿಜೆಪಿ ಹೈಕಮಾಂಡ್ ಕೂಡ ಪ್ರಮೋದ್ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಹಿಂದೇಟು ಹಾಕುತ್ತಿದೆ.
ಪ್ರಮೋದ್ ಮಧ್ವರಾಜ್ ಮಹತ್ವಾಕಾಂಕ್ಷೆ ಇರುವ ರಾಜಕಾರಣಿ.ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಮೊದಲ ಬಾರಿ ಶಾಸಕರಾದ ಅವರು , ಮೂರು ವರ್ಷದ ಒಳಗೇ ಸಚಿವರಾದರು.ಆಗ ಸಚಿವರಾಗಿದ್ದ ವಿನಯಕುಮಾರ್ ಸೊರಕೆ ಜಾಗಕ್ಕೆ ಪ್ರಮೋದ್ ರಿಪ್ಲೇಸ್ ಆಗಿದ್ದರು.ಅಷ್ಟರಮಟ್ಟಿಗೆ ಪ್ರಮೋದ್ ಪ್ರಭಾವಿ ಮುಖಂಡರಾಗಿದ್ದರು.ಎರಡು ವರ್ಷ ಸಚಿವರಾಗಿ ,ಕ್ಷೇತ್ರದಲ್ಲಿ ಯುವಜನತೆಯ ಕಣ್ಮಣಿಯಾಗಿದ್ದ ಅವರು ಮುಂದಿನ ಚುನಾವಣೆಯಲ್ಲಿ ಸೋತಿದ್ದೇ ಉಡುಪಿ ಜಿಲ್ಲೆ ಮಟ್ಟಿಗೆ ಒಂದು ಆಶ್ಚರ್ಯದ ಸಂಗತಿಯಾಗಿತ್ತು.
ಮುಂದೆ ರಘುಪತಿ ಭಟ್ ಪ್ರಮೋರ್ ರನ್ನು ಸೋಲಿಸಿದರು.ಇಷ್ಟು ಹೊತ್ತಿಗಾಗಲೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಪ್ರಮೋದ್ ಮಧ್ವರಾಜ್ ,ವಿನಯ್ ಕುಮಾರ್ ಸೊರಕೆ ಬಣಗಳು ನಿರ್ಮಾಣಗೊಂಡವು.ಪ್ರಮೋದ್ ಜಿಲ್ಲಾ ಕಚೇರಿಗೆ ಹೋಗುವುದೂ ಅಪರೂಪವಾಯಿತು.
ಈ ಮಧ್ಯೆ ಅವರು ಬಿಜೆಪಿ ಬಾಗಿಲು ಬಡಿಯುತ್ತಾ ,ಬಿಜೆಪಿ ವರಿಷ್ಠರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಾ ದಿನ ಕಳೆಯುತ್ತಿದ್ದರು.ಮೋದಿಯನ್ನು ಹೊಗಳಿದರು.ಅದಕ್ಕೂ ಮುನ್ನ ಟಿಪ್ಪೂ ವಿರುದ್ಧ ಹೇಳಿಕೆ ನೀಡಿ ,ಪಕ್ಷದ ಅಲ್ಪ ಸಂಖ್ಯಾತರ ಕೆಂಗಣ್ಣಿಗೆ ಈಡಾದರು. ಮುಂದೊಮ್ಮೆ ಮಾಧ್ಯಮದವರ ಜೊತೆ ,ಬಿಜೆಪಿ ಗೇಟ್ನಲ್ಲಿದ್ದೇನೆ ,ಗೇಟ್ ಇನ್ಬೂ ತೆರೆದಿಲ್ಲ ಎಂದು ಮಾರ್ಮಿಕವಾಗಿ ಹೇಳಿಕೆ ಕೊಟ್ಟರು.
ಸದ್ಯ ಅವರು ಕಾಂಗ್ರೆಸ್ ನಲ್ಲೂ ಸಕ್ರಿಯರಾಗಿಲ್ಲ.ಬಿಜೆಪಿಯಲ್ಲಿ ನಾಯಕರಿಗೆ ಕೊರತೆಯೂ ಇಲ್ಲ.ಅತ್ತ ಕಾಪು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಲು ಪ್ರಮೋದ್ ಉತ್ಸುಕರಾಗಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳು ನೀಡುತ್ತಿರುವ ಮಾಹಿತಿ.
ಒಟ್ಟಾರೆ ಪ್ರಮೋದ್ ಈಗ ಕಾಂಗ್ರೆಸ್ ಗೂ ಬೇಡವಾಗಿದ್ದಾರೆ.ಯಾಕೆಂದರೆ ಬ್ಲಾಕ್ ಕಾಂಗ್ರೆಸ್ ನಲ್ಲಿ ಅವರ ವಿರುದ್ಧ ಅಸಮಾಧಾನ ಕುದಿಯುತ್ತಿದ್ದು ,ಹೊಸ ಅಭ್ಯರ್ಥಿಗಳು ತೆರೆಮರೆಯ ಹಿಂದೆ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ.ಮುಂದೇನಾಗುತ್ತೋ ಕಾದು ನೋಡಬೇಕು.
Kshetra Samachara
18/03/2022 06:13 pm