ಉಡುಪಿ: ರಾಜ್ಯದಲ್ಲಿರುವ ಕೊರಗ ಸಮುದಾಯದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರೊಂದಿಗೆ ಇಂದು ಬೆಂಗಳೂರಿನ ಸಚಿವರ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಿದರು.
ಕೊರಗ ಸಮುದಾಯದವರು ವಾಸ್ತವ್ಯದ ಮನೆ ನಿರ್ಮಿಸುವಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ, ಸಮುದಾಯದವರ ಸಮಗ್ರ ಆರೋಗ್ಯ ತಪಾಸಣೆ ನಡೆಸುವುದು ಹಾಗೂ ವೈದ್ಯಕೀಯ ನೆರವು ಒದಗಿಸುವುದು, ಶೈಕ್ಷಣಿಕ ವ್ಯವಸ್ಥೆ, ಉನ್ನತ ಶಿಕ್ಷಣಕ್ಕೆ ಮೀಸಲಾತಿಯಲ್ಲಿ ವಿಶೇಷ ಒತ್ತು, ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ನೀಡುವುದು ಸೇರಿದಂತೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಇಲಾಖೆ ಹಾಕಿಕೊಂಡ ಕಾರ್ಯಕ್ರಮಗಳ ಉಪಯೋಗ ಸುಲಭವಾಗಿ ಜನರಿಗೆ ತಲುಪಿಸುವಂತಹ ವ್ಯವಸ್ಥೆ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು.
ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಆಲಿಸಲು ಕೊರಗರ ಜನವಸತಿ ಕಾಲನಿಯಲ್ಲಿ ವಾಸ್ತವ್ಯ ಹೂಡುವುದಾಗಿ ಸಚಿವ ಶ್ರೀರಾಮುಲು ಈ ಸಂದರ್ಭ ಆಶಯ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಗಳ ಇಲಾಖೆಯ ನಿರ್ದೇಶಕರಾದ ಕಾಂತರಾಜು, ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಕುಮಾರ ಕೆಂಜೂರು, ಶೇಖರ ಕೆಂಜೂರು, ದಿವಾಕರ ಕಳತ್ತೂರು, ದೀಪ ಜಪ್ತಿ, ಸುಶೀಲಾ ಕೆಂಜೂರು, ಸುರೇಂದ್ರ ಕಳತ್ತೂರು, ಯುಹಂದ್ರ ಕಳತ್ತೂರು ಉಪಸ್ಥಿತರಿದ್ದರು.
Kshetra Samachara
21/09/2021 08:25 pm