ಹೆಬ್ರಿ: ಪ್ರತಿನಿತ್ಯವೂ ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಮಾಡುತ್ತಿರುವುದರಿಂದ ಸಾಮಾನ್ಯ ಜನರ ಬದುಕು ದುರ್ಭರಗೊಂಡಿದೆ.
ದಿನಬಳಕೆ ವಸ್ತುಗಳ ಬೆಲೆಯೂ ಏರುತ್ತಿದ್ದು, ಜತೆಗೆ ಕೊರೊನಾ ಭೀತಿ, ಸಂಕಷ್ಟದ ನಡುವೆ ಜನರು ಬದುಕು ಸಾಗಿಸುವುದೇ ಬಹುಕಷ್ಟವಾಗಿದೆ.
ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇದ್ದರೆ ತೈಲದ ಮೇಲಿನ ತೆರಿಗೆಯನ್ನಾದರೂ ಇಳಿಸಲಿ. ತಪ್ಪಿದರೆ ಅತಿ ಶೀಘ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಎಚ್ಚರಿಸಿದ್ದಾರೆ.
ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಎಸ್‌ಟಿ ಬಂದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. ಆದರೀಗ ಬದುಕೇ ದುಸ್ತರವಾಗಿದೆ. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಗ್ಯಾಸ್ ಬೆಲೆ 350 ರೂ.ನಿಂದ 400ಕ್ಕೆ ಏರಿಸಿದಾಗ ಬಿಜೆಪಿಯವರು ಭಾರಿ ಪ್ರತಿಭಟನೆ ನಡೆಸಿದ್ದರು. ಈಗ ಗ್ಯಾಸ್ ಬೆಲೆ 850 ರೂ. ಇದೆ. ಪೆಟ್ರೋಲ್ ಬೆಲೆ ದಿನದಿನ ಏರುತ್ತಿದೆ. ಚುನಾವಣೆಗೆ ಮೊದಲು ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಈಗಿನ ತೈಲ ಬೆಲೆಯ ಅರ್ಧದಷ್ಟಾದರೂ ಬೆಲೆ ನೀಡಿ ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಉಡುಪಿ ಜಿಲ್ಲೆಯಲ್ಲೂ ಅಕ್ರಮ ಗಣಿಗಾರಿಕೆ : ರಾಜ್ಯದ ಅಕ್ರಮ ಸರ್ಕಾರದಿಂದ ಎಲ್ಲವೂ ಅಕ್ರಮವಾಗಿಯೇ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರದ ದ್ವಂದ್ವ ನೀತಿಯಿಂದಾಗಿ ಜಲ್ಲಿ, ಮರಳು ಸಹಿತ ನಿರ್ಮಾಣ ಸಾಮಗ್ರಿ ಬೆಲೆಯೂ ದುಬಾರಿಯಾಗಿದೆ. ಯಾವ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಮಂಜುನಾಥ ಪೂಜಾರಿ ದೂರಿದರು.
ಕಾಂಗ್ರೆಸ್ 60 ವರ್ಷಗಳಲ್ಲಿ ಏನು ಮಾಡಿದೆ ಎಂದು ಮೋದಿ ಪ್ರಶ್ನಿಸುತ್ತಾರೆ. ಅಂದಿನಿಂದ ಈ ತನಕ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿದ ವಿಮಾನ ನಿಲ್ದಾಣ, ರೈಲ್ವೆ ಸಹಿತ ಎಲ್ಲವನ್ನೂ ಮೋದಿ ಖಾಸಗಿಯವರಿಗೆ ಮಾರುತ್ತಿದ್ದಾರೆ. ಇನ್ನು ಭಾರತೀಯ ಸೇನೆಯನ್ನು ಮಾರಲು ಬಾಕಿ ಇದೆ. ಮೋದಿಗೆ ಶಾಸಕರು, ಸಂಸದರ ಖರೀದಿ, ಬೇರೆ ಪಕ್ಷದ ಸರ್ಕಾರಗಳನ್ನು ಉರುಳಿಸಲು, ಪ್ರತಿಮೆಗಳ ಸ್ಥಾಪನೆ, ಐಷಾರಾಮಿ ಜೀವನ ವ್ಯವಸ್ಥೆಗೆ ಕೇಂದ್ರದಲ್ಲಿ ಹಣವಿದೆ. ಆದರೆ, ಜನರ ಸಮಸ್ಯೆಗೆ, ಬಡವರ ಪರವಾದ ಯೋಜನೆಗಳಿಗೆ ಹಣವಿಲ್ಲ. ಸಿದ್ಧರಾಮಯ್ಯ ನವರು ಬಡವರಿಗೆ ನೀಡಿದ ಅನ್ನಭಾಗ್ಯದ ಅಕ್ಕಿಯನ್ನೂ ಬಿಜೆಪಿಯವರು ಕಿತ್ತುಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಸದಸ್ಯ ವರಂಗ ಲಕ್ಷ್ಮಣ ಆಚಾರ್, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷೆ ಮುದ್ರಾಡಿ ಶಶಿಕಲಾ ಡಿ. ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.
Kshetra Samachara
26/01/2021 07:27 pm