ಕಾಪು: ಹೆಜಮಾಡಿ ಮೀನುಗಾರಿಕೆ ಬಂದರು ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜ. 19ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಭಾನುವಾರ ಹೆಜಮಾಡಿಯ ಗುಂಡಿ ಮೊಗವೀರ ಸಭಾಗೃಹದಲ್ಲಿ ಮುಲ್ಕಿ ವಲಯ ಪರ್ಸೀನ್ ಮತ್ತು ಟ್ರಾಲ್ ಬೋಟ್ ಮೀನುಗಾರರ ಸಂಘ ಮತ್ತು ಹೆಜಮಾಡಿ ಬಂದರು ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾತನಾಡಿದರು.
ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಯಾದರೂ ಮುಖ್ಯಮಂತ್ರಿ ಆಗಮನಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಗೃಹ ಸಚಿವ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಎಲ್ಲ ಶಾಸಕರು, ಮೀನುಗಾರ ಮುಖಂಡರಾದ ಜಿ.ಶಂಕರ್, ಆನಂದ ಕುಂದರ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ ಸಹಿತ ಜನಪ್ರತಿನಿಧಿಗಳು ಅಲ್ಲದೆ, ಈ ಭಾಗದಿಂದ ಸುಮಾರು 2ರಿಂದ 3 ಸಾವಿರ ಮೀನುಗಾರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೆಜಮಾಡಿ ಸರ್ವಋತು ಮೀನುಗಾರಿಕೆ ಬಂದರು ಯೋಜನೆ ಜಾರಿಯಿಂದ ಕಾಪುವಿನಿಂದ ಸುರತ್ಕಲ್ ತನಕದ ಮೀನುಗಾರರಿಗೆ ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸದಾಶಿವ ಕೆ.ಕೋಟ್ಯಾನ್, ಗೌರವ ಸಲಹೆಗಾರ ನಾರಾಯಣ ಕೆ.ಮೆಂಡನ್, ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ಎಸ್.ಬಂಗೇರ, ವಿನೋದ್ ಕೆ.ಕೋಟ್ಯಾನ್, ಸದಸ್ಯರಾದ ಸುಧಾಕರ ಕರ್ಕೇರ, ಏಕನಾಥ ಕರ್ಕೇರ, ಬಿಜೆಪಿ ಮುಖಂಡ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉಪಸ್ಥಿತರಿದ್ದರು.
Kshetra Samachara
17/01/2021 08:30 pm