ಕುಂದಾಪುರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಗಿ ಪರಿವರ್ತನೆಗೊಂಡ ಪ್ರಸಂಗ ನಡೆದಿದೆ. ಸಮಾನ್ಯ ಸಭೆಯಲ್ಲಿ ಏಕವಚನ ಪ್ರಯೋಗ ಖಂಡಿಸಿ ನಾಮನಿರ್ದೇಶಿತ ಸದಸ್ಯರೊಬ್ಬರು ನಿಂತುಕೊಂಡೇ ಪ್ರತಿಭಟನೆ ನಡೆಸಿದ್ದು ಗಮನ ಸೆಳೆದರೆ ,ಸ್ಥಾಯಿ ಸಮಿತಿ ಆಯ್ಕೆ ವಿವಾದ ಹಾಗೂ ಟೆಂಡರ್ ಕರೆಯದೆ ನಡೆಸಿದ ಕಾಮಗಾರಿ ಸಂಬಂಧ ನಡೆದ ತನಿಖಾ ವರದಿಗೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದದ್ದು ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಪುರಸಭೆಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ದೇವಕಿ ಪಿ.ಸಣ್ಣಯ್ಯ, ಸ್ಥಾಯಿ ಸಮಿತಿ ಆಯ್ಕೆ ಹಾಗೂ ಟೆಂಡರ್ ಕರೆಯದೆ ನಡೆಸಿದ ಕಾಮಗಾರಿ ಬಗ್ಗೆ ಡಿಸಿಗೆ ದೂರು ನೀಡಿದ್ದು, ನಗರಾಭಿವೃದ್ಧಿ ಕೋಶದ ಪಿಡಿ ತನಿಖೆ ಮಾಡಿ ಸಲ್ಲಿಸಿರುವ ವರದಿ ಪ್ರತಿ ನೀಡುವಂತೆ ಒತ್ತಾಯಿಸಿದರು.
ಇದು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ವೇದಿಕೆಯಾಯಿತು. ಸ್ಥಾಯಿ ಸಮಿತಿ ಆಯ್ಕೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದು, ಸರಿಪಡಿಸಿಕೊಂಡು ಹೋಗುವ ನಿರ್ಣಯ ಆಗಿದೆ ಎಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮನವಿ ಮಾಡಿದರೂ ವಿಪಕ್ಷ ಸದಸ್ಯರು ಸುಮ್ಮನಾಗಲಿಲ್ಲ.
ಈ ನಡುವೆ ನಾಮನಿರ್ದೇಶಿತ ಸದಸ್ಯರೊಬ್ಬರನ್ನು ದೇವಕಿ ಸಣ್ಣಯ್ಯ ಏಕವಚನದಲ್ಲಿ ಸಂಭೋದಿಸಿದ್ದು ಸಭೆಯಲ್ಲಿ ಮತ್ತಷ್ಟು ಏರುದನಿಯ ಮಾತಿಗೆ ಕಾರಣವಾಯಿತು.
ಟೆಂಡರ್ ಕರೆಯದೆ 50 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ ಎಂಬ ವಿಷಯ ಸಭೆಯಲ್ಲಿ ಮತ್ತೊಮ್ಮೆ ಮಾತಿನ ಚಕಮಕಿಗೆ ವೇದಿಕೆಯಾಯಿತು. ಒಟ್ಟಾರೆ ನಗರದ ಅಭಿವೃದ್ಧಿ ,ಸ್ವಚ್ಛತೆ ,ಮೂಲಸೌಕರ್ಯ ದ ಚರ್ಚೆಗೆ ವೇದಿಕೆಯಾಗಬೇಕಿದ್ದ ಸಾಮಾನ್ಯ ಸಭೆ ಗೊಂದಲದಲ್ಲೇ ಕೊನೆಗೊಂಡಿತು.
Kshetra Samachara
31/03/2022 03:00 pm