ಕುಂದಾಪುರ: ನೂರಾರು ದೈವ ದೇವರುಗಳಿಗೆ ಮೂರ್ತರೂಪ ನೀಡಿದ ಹಿರಿಯ ಶಿಲ್ಪಿ, 2021ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕ್ರತ ಉಪ್ಪುಂದದ ರತ್ನಾಕರ ಎಸ್.ಗುಡಿಗಾರ್(84)ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಉಪ್ಪುಂದ ನ್ಯೂ ಜನತಾ ಕಾಲೋನಿ ನಿವಾಸಿಯಾಗಿರುವ ರತ್ನಾಕರ ಗುಡಿಗಾರ್ ಅವರು ಕಳೆದ 60 ವರ್ಷಗಳಿಂದ ವಂಶಪಾರಂಪರ್ಯವಾಗಿ ಮರದಿಂದ ದೇವರ ಮೂರ್ತಿ ಕೆತ್ತನೆ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದರು. ತಮ್ಮ 84 ವರ್ಷದ ವಯಸ್ಸಿನಲ್ಲಿಯೂ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದ ಗುಡಿಗಾರರು, ವರ್ಷಕ್ಕೆ 150ಕ್ಕೂ ಹೆಚ್ಚು ದೇವರ ಮೂರ್ತಿ ಕೆತ್ತನೆ ಮಾಡುತ್ತಿದ್ದರು.
ದೆಹಲಿ, ಭೂಪಾಲ್, ಚೆನೈ ಹಾಗೂ ರಾಜ್ಯದ ವಿವಿಧೆಡೆ ಇವರ ಕೆತ್ತನೆಯ ಮೂರ್ತಿಗಳು ಪೂಜಿಸಲ್ಪಡುತ್ತಿದೆ. ಉಡುಪಿ ಜಿಲ್ಲೆಯ ನೂರಾರು ದೈವಸ್ಥಾನಗಳ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಒಂದು ಅಡಿಯಿಂದ 28 ಅಡಿಯ ತನಕದ ಮೂರ್ತಿಗಳನ್ನು ಅವರು ಕೆತ್ತನೆ ಮಾಡಿದ್ದಾರೆ.
ರತ್ನಾಕರ ಗುಡಿಗಾರ್ ಅವರ ಸೇವೆಯನ್ನು ಗುರುತಿಸಿ ಸಾಂಪ್ರದಾಯಿಕ ಶಿಲ್ಪಕಲಾ ವಿಭಾಗದಲ್ಲಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದರು. ರತ್ನಾಕರ ಗುಡಿಗಾರರ ಸಾಧನೆಯನ್ನು ತಿಂಗಳ ಹಿಂದಷ್ಟೆ ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ ಮಾಡಿತ್ತು. ರತ್ನಾಕರ ಗುಡಿಗಾರರು ಪುತ್ರರಾದ ಸುಕುಮಾರ್, ಕೃಷ್ಣ ಹಾಗೂ ಪುತ್ರಿ ನಾಗವೇಣಿಯವರನ್ನು ಅಗಲಿದ್ದಾರೆ.
Kshetra Samachara
12/10/2022 07:58 pm