ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರಾವಳಿಯಲ್ಲಿ ಪಂಜರ ಮೀನು ಕೃಷಿ ಹವಾ!; ಯಶಸ್ಸಿನತ್ತ ಹೊಸ ಮತ್ಸ್ಯಗಾರಿಕೆ ಕಾಯಕ

ಕರಾವಳಿಯ ಪ್ರಮುಖ ಉದ್ಯೋಗ ಮೀನುಗಾರಿಕೆ. ಇಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆ ಆಗುತ್ತಲೇ ಇರುತ್ತವೆ. ಅದರಂತೆ ಇತ್ತೀಚಿನ ವರ್ಷಗಳಲ್ಲಿ ಪಂಜರ ಮೀನು ಕೃಷಿ ಹೆಚ್ಚು ಮುನ್ನಲೆಗೆ ಬರುತ್ತಿದ್ದು, ಯುವ ಮೀನುಗಾರರು ಪಂಜರ ಮೀನು ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಜಿಲ್ಲೆಯ ಉಪ್ಪುಂದದ ಗಣೇಶ್, ಪಂಜರ ಮೀನು ಕೃಷಿ ಆರಂಭಿಸಿ ಸ್ವಂತ ಕಾಲ ಮೇಲೆ ನಿಂತು ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಸದ್ಯ ಇವರು 7 ಪಂಜರ ನಿರ್ಮಿಸಿ, ಕುರಡಿ (ಸೀಬಾಸ್) ಎಂಬ ತಳಿಯ ಮೀನು ಸಾಕುತ್ತಿದ್ದಾರೆ. ಕಬ್ಬಿಣದ ಪಂಜರ ನಿರ್ಮಿಸಿ ಅದನ್ನು ಹೊಳೆಯಲ್ಲಿ ಮೇಲ್ಭಾಗ ಮಾತ್ರ ಹೊರಗೆ ಕಾಣುವಂತೆ ಕಟ್ಟಿ, ಅದರೊಳಗೆ ಮೀನು ಮರಿಗಳನ್ನು ಬಿಟ್ಟು, ಪ್ರತಿದಿನ ಆಹಾರ ಹಾಕಿ, 1ರಿಂದ 2 ವರ್ಷ ವರೆಗೆ ಸಾಕಬೇಕು. ನಂತರ ಮೀನು ಮಾರಾಟ ಮಾಡಲಾಗುತ್ತದೆ. ಈ ಮೀನನ್ನು ಉಪ್ಪುನೀರು ಮತ್ತು ಸಿಹಿನೀರು ಎರಡರಲ್ಲೂ ಸಾಕಬಹುದು ಎಂಬುದನ್ನು ಗಣೇಶ್ ಸಾಧಿಸಿ ತೋರಿಸಿದ್ದಾರೆ.

ಒಂದು ಪಂಜರಕ್ಕೆ 1000 ದಷ್ಟು ಮೀನುಮರಿಗಳನ್ನು ಹಾಕುತ್ತಾರೆ. ಅವು ಮಾಂಸಾಹಾರಿ ಮೀನು ಆಗಿರುವುದರಿಂದ, ಕೆಲವು ಚಿಕ್ಕಮರಿಗಳು ದೊಡ್ಡ ಮೀನುಗಳಿಗೆ ಆಹಾರವಾಗುತ್ತವೆ. ಕೊನೆಗೆ 700 - 800 ಮೀನು ಉಳಿಯುತ್ತವೆ. ಮೀನು-ಪ್ರಾಣಿ ಮಾಂಸ ತ್ಯಾಜ್ಯ ಇತ್ಯಾದಿ ಹಾಕಿ ಸಾಕಲಾಗುತ್ತದೆ. 1 ವರ್ಷದಲ್ಲಿ 2 ಕೆಜಿ, 2 ವರ್ಷಗಳಲ್ಲಿ 4-5 ಕೆಜಿವರೆಗೆ ಬೆಳೆಯುತ್ತವೆ. ಈ ಮಧ್ಯೆ ಬೇಡಿಕೆಯಂತೆ ಕೊಯ್ಲು ಮಾಡಲಾಗುತ್ತದೆ. ಪ್ರಸ್ತುತ ಮೀನನ್ನು ಕೆಜಿಗೆ 450 ರೂ.ನಂತೆ ಮಾರಾಟವಾಗುತ್ತಿದೆ.

ಅಂದಹಾಗೆ, ಪಂಜರ ಮೀನು ಕೃಷಿ ಹಲವು ವರ್ಷಗಳ ಹಿಂದೆಯೇ ಕರಾವಳಿಯಲ್ಲಿ ಚಾಲ್ತಿಯಲ್ಲಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮೀನುಗಾರರು ತೊಡಗಿಸಿದ್ದಾರೆ. ಮೀನು ಮರಿಗಳನ್ನು ಹೊರ ರಾಜ್ಯದಿಂದ ತರಬೇಕಾದ ಅನಿವಾರ್ಯತೆ ಈಗಲೂ ಇದೆ. ಹೀಗಾಗಿ ಸರ್ಕಾರ, ಈ ಮೀನು ಕೃಷಿಗೆ ಉತ್ತೇಜನ ನೀಡಿದರೆ ಮೀನುಗಾರರಿಗೆ ಇನ್ನಷ್ಟು ಅನುಕೂಲವಾಗಬಹುದು.

ವಿಶೇಷ ವರದಿ: ರಹೀಂ ಉಜಿರೆ

Edited By :
PublicNext

PublicNext

25/03/2022 05:45 pm

Cinque Terre

37.82 K

Cinque Terre

1

ಸಂಬಂಧಿತ ಸುದ್ದಿ