ವರದಿ: ರಹೀಂ ಉಜಿರೆ
ಉಡುಪಿ: ಇವರು ಅಪೂರ್ವ ಬೈಕಾಡಿ. ಈ ಯುವತಿ ಬೈಕನ್ನೇರಿದರೆ ಕಾಡು, ಗುಡ್ಡ, ಬೆಟ್ಟದ ಹಾದಿಗಳಲ್ಲಿ ಸಾಗಿ ಗುರಿ ತಲುಪವಲ್ಲಿ ಸೈ ಎನಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ಆರು ಸುತ್ತಿನ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‍ಶಿಪ್(ಐಎನ್‍ಆರ್‍ಸಿ 2022) ಮೊದಲ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದ ಉಡುಪಿಯ ಅಪೂರ್ವ ಬೈಕಾಡಿ(24) ಅಂತರರಾಷ್ಟ್ರೀಯ ಬೈಕರ್ ಆಗಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಬೇಕೆನ್ನುವ ಕನಸು ಕಾಣುತ್ತಿದ್ದಾರೆ.
ಮಣಿಪಾಲ ಅಲೆವೂರು ರಸ್ತೆಯ ನಿವಾಸಿ ಬಿ.ಕೆ. ನಾರಾಯಣ್ ಹಾಗೂ ಭಾರತಿ ದಂಪತಿಯ ಪುತ್ರಿಯಾದ ಅಪೂರ್ವ ಬೈಕಾಡಿ, 16ನೇ ವಯಸ್ಸಿಗೆ ಸ್ವ ಪರಿಶ್ರಮದಿಂದ ಕಲಿತ ಬೈಕ್ ಬದುಕಿನ ಸಾಧನೆಯ ಹಾದಿ ತೋರುತ್ತಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಿಂದ ಪಡೆದಿದ್ದಾರೆ.
ಕಾಲೇಜು ಪ್ರಾಜೆಕ್ಟ್‌ಗೆ ತಂಡದಲ್ಲಿ ರೇಸಿಂಗ್ ಕಾರನ್ನೇ ತಯಾರಿಸಿದ್ದರು. ಮಂಗಳೂರಿನ ತಣ್ಣೀರು ಬಾವಿಯಲ್ಲಿ ಡಿಸೆಂಬರ್‌ನಿಂದ ಏಪ್ರಿಲ್ ತನಕ ಸರ್ಫಿಂಗ್, ರಜೆ ಸಹಿತ ಉಳಿದ ಅವಧಿಯಲ್ಲಿ ಬೈಕಿಂಗ್ ರೇಸಿಂಗ್ ಪ್ರಾಕ್ಟೀಸ್‌ಗೆ ಸಮಯ ಮೀಸಲಿಡಬೇಕಾದ ಅಪೂರ್ವ ಹೊಟ್ಟೆಪಾಡಿಗಾಗಿ ವೃತ್ತಿಯನ್ನು ನಿಭಾಯಿಸಬೇಕಾದ ಸವಾಲು ನಿಭಾಯಿಸುವಲ್ಲೂ ಸಮತೋಲನ ಕಾಯ್ದುಕೊಂಡಿದ್ದಾರೆ.
ಶಾಲೆ ಕಾಲೇಜಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿದ್ದ ಇವರು, ಬೈಕ್ ರೇಸ್ ಕುರಿತು ವಿಶೇಷ ಆಸಕ್ತಿ ಹೊಂದಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಮ್ ಮತ್ತು ಗೂಗಲ್‌ನಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಿ ಕಾರ್ಯೋನ್ಮುಖರಾಗುತ್ತಾರೆ. ಕೋವಿಡ್ ನಡುವೆ ಬೈಕ್ ರೇಸಿಂಗ್ ಅಭ್ಯಾಸ ಮಾಡಲಾಗದಿದ್ದರೂ ಚೆನ್ನೈ, ಕೇರಳ, ಕೊಯಮತ್ತೂರು, ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಹವ್ಯಾಸಿ ಬೈಕ್ ರೈಡರ್‍ಗಳಿಗೆ ಗೈಡ್ ಮಾಡುತ್ತಿರುವ ಅಪೂರ್ವ ಸದ್ಯ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ.
PublicNext
30/05/2022 08:34 pm