ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಆಶ್ರಯದಲ್ಲಿ ಮಾ. 6 ರವರೆಗೆ ನಡೆಯಲಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆ ಚಾಲನೆ ನೀಡಲಾಯಿತು.
ವಿದ್ಯಾಗಿರಿ ಕ್ಯಾಂಪಸ್‌ನ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಿದ ಮೂಲ್ಕಿ-ಮೂಡುಬಿದೆರೆ ಶಾಸಕ ಉಮಾನಾಥ ಕೋಟ್ಯಾನ್, ಪ್ರತಿಯೊಂದು ಆಟದಲ್ಲಿ ಕ್ರೀಡಾಸ್ಪೂರ್ತಿಯಿಂದ ಕೊನೆಯವರೆಗೂ ತೊಡಗಿಸಿಕೊಂಡಾಗ ಗೆಲುವು ಖಚಿತ. ಕ್ರೀಡಾರ್ಥಿಗಳು ತಮ್ಮ ಆಟಗಳಲ್ಲಿ ಸಕ್ರಿಯ ತೊಡಗಿಸಿಕೊಂಡು ಸಾಧಿಸಬೇಕು. ಆಳ್ವಾಸ್ ಸಂಸ್ಥೆಯು ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳ ಪ್ರತಿಭೆಗೆ ವಿಪುಲ ಅವಕಾಶ ನೀಡುತ್ತಿದೆ ಎಂದರು.
ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ. ಕಿಶೋರ್ ಕುಮಾರ್ ಸಿ ಕೆ ಮಾತನಾಡಿ, ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ 17ನೇ ಬಾರಿಗೆ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮಂಗಳೂರು ವಿವಿ ತಂಡದಲ್ಲಿರುವ 9ಕ್ಕೂ ಅಧಿಕ ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳೇ ಆಗಿರುವುದು ಇಲ್ಲಿನ ಕ್ರೀಡಾ ಸಾಧನೆಗೆ ಹಿಡಿದ ಕೈಗನ್ನಡಿ. ಆಳ್ವಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅಯೋಜಿಸಲ್ಪಡುವ ಕ್ರೀಡಾಕೂಟಗಳು ಅತ್ಯಂತ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮಗಳಾಗಿವೆ ಎಂದರು.
ರಾಷ್ಟ್ರ ಮಟ್ಟದ 31 ಪುರುಷರ ತಂಡ ಹಾಗೂ 27 ಮಹಿಳೆಯರ ತಂಡಗಳ 700 ಕ್ರೀಡಾಪಟುಗಳು ಹಾಗೂ 500 ಕ್ರೀಡಾಧಿಕಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದರು. ಆಕರ್ಷಕ ಸುಡುಮದ್ದಿನ ಪ್ರದರ್ಶನ ಆಯೋಜಿಸಲಾಗಿತ್ತು. ಈ ಬಾರಿಯ ಪಂದ್ಯಾವಳಿಯಲ್ಲಿ ಅತ್ಯಾಧುನಿಕ ಫ್ಲಡ್ ಲೈಟ್ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಇಂಡೋರ್ ಆರ್ಟಿಫಿಶಿಯಲ್ ಗ್ರಾಸ್ ಕೋರ್ಟ್ ನಲ್ಲಿ ಮ್ಯಾಚ್ ಗಳು ನಡೆಯಲಿದೆ. ಪಂದ್ಯಾವಳಿಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತ ತಂಡದ ಆಟಗಾರರಿಗೆ ಟೈಮ್ ಎಕ್ಸ್ ರಿಸ್ಟ್ ವಾಚ್ ಹಾಗೂ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತರಿಗೆ ಟೈಮ್ ಎಕ್ಸ್ ಸ್ಮಾರ್ಟ್ ವಾಚ್ ಬಹುಮಾನವಾಗಿ ನೀಡಲಾಗುವುದು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಡಿವೈಇಎಸ್ ಡೆಪ್ಯುಟಿ ಡೈರೆಕ್ಟರ್ ಪ್ರದೀಪ್ ಡಿಸೋಜ, ಬ್ಯಾಡ್ಮಿಂಟನ್ ಫೆಡೆರೇಷನ್ ಆಫ್ ಇಂಡಿಯಾದ ಜನರಲ್ ಸೆಕ್ರೆಟರಿ ದಿನೇಶ್ ಉಪಸ್ಥಿತರಿದ್ದರು.
Kshetra Samachara
03/03/2022 10:19 am