ಬಂಟ್ವಾಳ: ಪ್ರಸಕ್ತ ಸ್ಪರ್ಧಾತ್ಮಕ ಸಮಾಜದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸರ್ಕಾರವು ಸ್ಪಂದಿಸಿ ತ್ವರಿತ ನೆರವು ಮತ್ತಿತರ ಮೂಲಭೂತ ಸೌಕರ್ಯ ಒದಗಿಸಿದಾಗ ಅವರಿಂದ ಅಪ್ರತಿಮ ಸಾಧನೆ ಮೂಡಿ ಬರುತ್ತದೆ ಎಂದು ಮನ್ ದೇವ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆಯಲ್ಲಿ ಗುಣಶ್ರೀ ವಿದ್ಯಾಲಯ ಮತ್ತು ನಾಗರಿಕರ ವತಿಯಿಂದ ಶುಕ್ರವಾರ ನಡೆದ ರಾಷ್ಟ್ರೀಯ ಕ್ರೀಡಾ ಸಾಧಕಿ ರಮ್ಯಶ್ರೀ ಜೈನ್ ಇವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸ್ಸಾಂನ ಗುವಾಹಟಿಯಲ್ಲಿ ಫೆ.೯ರಂದು ನಡೆದ '೩೬ನೇ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-೨೦೨೧'ರ ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಗಳಿಸುವ ಮೂಲಕ ನಮ್ಮ ಶಿಕ್ಷಣ ಸಂಸ್ಥೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದರು.
ಜೈನ್ ಮಿಲನ್ ವಲಯ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ನಿವೃತ್ತ ಮುಖ್ಯಶಿಕ್ಷಕ ದಾಮೋದರ ರಾವ್, ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಜೈನ್, ಡಾ.ಕೃಷ್ಣಮೂರ್ತಿ, ಸಂಗಬೆಟ್ಟು ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಐಗಳ್, ಚಂದ್ರಹಾಸ ಗುರಿಕಾರ, ನಿವೃತ್ತ ಅರಣ್ಯಾಧಿಕಾರಿ ದಾಮೋದರ ಶೆಟ್ಟಿಗಾರ್ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಳದಿಂದ ಗುಣಶ್ರೀ ವಿದ್ಯಾಲಯ ತನಕ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ರಮ್ಯಶ್ರೀ ಜೈನ್ ಅವರನ್ನು ಸ್ವಾಗತಿಸಲಾಯಿತು. ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೋ ಸ್ವಾಗತಿಸಿ, ಪ್ರಾಂಶುಪಾಲೆ ಕು.ಲಾವಣ್ಯ ವಂದಿಸಿದರು.
Kshetra Samachara
14/02/2021 06:38 pm