ಉಡುಪಿ: ಕರಾವಳಿ ಕಾವಲು ಪೊಲೀಸ್ ತಂಡ ಈ ಬಾರಿಯ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಕ್ರಿಕೆಟ್ ಕಪ್ ಗೆದ್ದಿದೆ. ಎಸ್ ಪಿ ನೇತೃತ್ವದ ಜಿಲ್ಲಾ ಪೊಲೀಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಗಿದೆ.
72 ನೇ ಗಣರಾಜ್ಯೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾಡಳಿತ ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಳಿ ಆಯೋಜಿಸಿತ್ತು. ಡಿ.ಸಿ. ಇಲೆವೆನ್, ಉಡುಪಿ ಜಿಲ್ಲಾ ಪೊಲೀಸ್, ಕರಾವಳಿ ಕಾವಲು ಪೊಲೀಸ್, ಜಿಲ್ಲಾ ಸರಕಾರಿ ವೈದ್ಯರ ತಂಡ, ಜಿಲ್ಲಾ ಪಂಚಾಯಿತಿ ಮತ್ತು ಪತ್ರಕರ್ತರ ತಂಡ ಕ್ರಿಕೆಟ್ ಪಾಲ್ಗೊಂಡಿದ್ದವು.
ನಿಗದಿತ ಹತ್ತು ಓವರ್ ಗಳ ಮೊದಲ ಪಂದ್ಯದಲ್ಲಿ ಕರಾವಳಿ ಪೊಲೀಸರ ತಂಡ ಜಿಲ್ಲಾ ವೈದ್ಯಾಧಿಕಾರಿಗಳ ತಂಡವನ್ನು ಸೋಲಿಸಿತು. ಡಿ.ಸಿ. ಇಲೆವೆನ್ ಮತ್ತು ಜಿಲ್ಲಾ ಪೊಲೀಸ್ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಲೀಗ್ ಪಂದ್ಯದಲ್ಲಿ ಎಸ್ ಪಿ. ವಿಷ್ಣುವರ್ಧನ್ ನೇತೃತ್ವದ ತಂಡ ವಿಜಯಿಯಾಯಿತು. ಸೆಮಿ ಫೈನಲ್ ನಲ್ಲಿ ಪತ್ರಕರ್ತರ ತಂಡ ಜಿಲ್ಲಾ ಪೊಲೀಸ್ ತಂಡದ ಎದುರು ಸೋಲನುಭವಿಸಿತು. ಸಿಇಒ ನವೀನ್ ಭಟ್ ನೇತೃತ್ವದ ಜಿಪಂ ತಂಡವನ್ನು ಸಿಎಸ್ ಪಿ ತಂಡ ಮಣಿಸಿ ಫೈನಲ್ ಗೇರಿತು.
ಕರಾವಳಿ ಕಾವಲು ಪೊಲೀಸ್ ತಂಡ ಉಡುಪಿ ಜಿಲ್ಲಾ ಪೊಲೀಸ್ ತಂಡವನ್ನು ಮಣಿಸಿ ಗಣರಾಜ್ಯೋತ್ಸವ ಕಪ್ ಗೆದ್ದಿದೆ. ಗೆಲ್ಲುವ ಹಾಟ್ ಫೇವರೆಟ್ ತಂಡವೆಂದು ಬಿಂಬಿತವಾಗಿದ್ದ ಜಿಲ್ಲಾ ಪೊಲೀಸ್ ತಂಡ ರೋಚಕ ತಿರುವು ಕಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಜಿಲ್ಲಾ ಪೊಲೀಸ್ ತಂಡದಲ್ಲಿ ಆಡಿದ ಪ್ರಶಾಂತ್ ಪಡುಕರೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್ , ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಕುಮಾರ್, ಜಿಪಂ ಸಿಇಒ ನವೀನ್ ಭಟ್, ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಚೂಡ, ಕೊರೊನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲೆಯ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
Kshetra Samachara
24/01/2021 06:22 pm