ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಗರವೀಗ ಕಂಬಳ ಸಮರಾಂಗಣ!; ಕೋಣಗಳ ಶಕ್ತಿ, ಓಟಗಾರನ ವೇಗವೇ ಪ್ರಧಾನ

ಮಂಗಳೂರು: ಕರಾವಳಿಯಲ್ಲಿ ಕೃಷಿಕರು ಮನೋರಂಜನೆಗಾಗಿ ಕಂಬಳ ಆಯೋಜಿಸುತ್ತಾರೆ‌. ಕಂಬಳ ಜನಪದ ಕ್ರೀಡೆಯಂತೆ ಪ್ರತಿಷ್ಠೆಯ ವಿಚಾರವೂ ಹೌದು. ಆದರೆ ಕೃಷಿ ನಗರದಿಂದ ದೂರವಾಗುತ್ತಿದ್ದಂತೆ ಕಂಬಳ ಕ್ರೀಡೆಯೂ ನಗರದಿಂದ ಮರೆಯಾಯಿತು. ನಗರ ಪ್ರದೇಶದವರು ಕಂಬಳವನ್ನು ಆಸ್ವಾದಿಸಲು ಹಳ್ಳಿಗೆ ಹೋಗಬೇಕಿತ್ತು. ಆದರೆ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದ ಮಂಗಳೂರು ಕಂಬಳ ಸಮಿತಿಯು ಈ ಕೊರತೆಯನ್ನು ದೂರ ಮಾಡಿದೆ.

‌ಈ ಬಾರಿಯೂ ಮಂಗಳೂರು ಕಂಬಳ ಸಮಿತಿಯು ಐದನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳವನ್ನು ಆಯೋಜಿಸಿದೆ. ನಗರದ ಮಂದಿಗೂ ತುಳುನಾಡಿನ ಜಾನಪದ ಕ್ರೀಡೆಯ ಸೊಗಡನ್ನು ಪರಿಚಯಿಸಲು ನಗರದ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಮಂಗಳೂರು ಕಂಬಳವನ್ನು ಆಯೋಜಿಸಲಾಗಿದೆ. 140-150 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸಲಿವೆ.

ಕೃಷಿ ಸಂಸ್ಕೃತಿಯ ಭಾಗವಾಗಿದ್ದ ಕಂಬಳವು ಇಂದು ಸಂಪೂರ್ಣ ಜನಪದ ಕ್ರೀಡಾ ಸ್ಥಾನವನ್ನು ಪಡೆದಿದೆ. ಕಂಬಳ ವೀಕ್ಷಣೆಗೆ ಸ್ಟೇಡಿಯಂಗಳ ನಿರ್ಮಾಣವಾಗಿದೆ. ಕೋಣಗಳ ಓಟಗಾರರಿಗೆ ತರಬೇತಿ ಕೇಂದ್ರಗಳು ಆರಂಭವಾಗಿದೆ. ಓಟದ ತೀರ್ಪಿನಲ್ಲಿ ವ್ಯತ್ಯಾಸವಾಗಬಾರದೆಂದು ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಕೆ ಮಾಡಲಾಗುತ್ತದೆ. ಇದೀಗ ಕಂಬಳ ಯುವ ಸಮುದಾಯದ ಕ್ರೇಜ್ ಗೂ ಕಾರಣವಾಗಿದೆ. ಕಂಬಳ ಓಟಗಾರರು ಯಾವ ಸ್ಟಾರ್ ಕ್ರೀಡಾಪಟುಗಳಿಗಿಂತ ಮಾನ - ಸನ್ಮಾನ ಪಡೆಯುತ್ತಾರೆ. ಕೋಣಗಳೂ ರಾಜ ಮರ್ಯಾದೆಯನ್ನು ಪಡೆಯುತ್ತಿದೆ. ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಬಳ ಕರಾವಳಿಯ ಅತ್ಯಂತ ಪ್ರತಿಷ್ಠೆಯ ಮನೋರಂಜನಾತ್ಮಕ ಕ್ರೀಡೆಯಾಗಿ ಮಾರ್ಪಟ್ಟಿದೆ.

Edited By :
PublicNext

PublicNext

27/03/2022 04:54 pm

Cinque Terre

49.74 K

Cinque Terre

0