ವರದಿ: ರಹೀಂ ಉಜಿರೆ
ಮಲ್ಪೆ: ಇದೊಂದು ಅಪೂರ್ವ ಸಾಧನೆ. ಅದೂ ಕೂಡ ,ನಿವೃತ್ತರಾಗಿ ಮನೆಯಲ್ಲಿ ಕುಳಿತುಕೊಳ್ಳುವ 67 ನೇ ವಯಸ್ಸಿನಲ್ಲಿ! ಹಿರಿಯ ಈಜುಪಟು ಗಂಗಾಧರ್ ಜಿ.ಕಡೆಕಾರ್ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. ತಮ್ಮ ಕೈ ಮತ್ತು ಕಾಲುಗಳಿಗೆ ಕೋಳ ತೊಟ್ಟು ಸಮುದ್ರದಲ್ಲಿ 3.5 ಕಿ.ಮೀ. ದೂರ ಈಜಿ, ಅರಬ್ಬೀ ಸಮುದ್ರವನ್ನೇ ಗೆದ್ದ ಅಪೂರ್ವ ವಿಶ್ವ ದಾಖಲೆ !
ಇಂದು ಬೆಳಗ್ಗೆ ಕೊರೆಯುವ ಚಳಿ ನಡುವೆಯೇ 67 ರ ಹರೆಯದ ಗಂಗಾಧರ್ ಜಿ ಪಡುಕೆರೆ ಶ್ರೀ ದೇವಿ ಭಜನಾ ಮಂದಿರದ ಬಳಿಯ ಕಡಲ ತೀರದಿಂದ ಕೈ ಮತ್ತು ಕಾಲುಗಳಿಗೆ ಕೋಳ ತೊಟ್ಟು ಸಮುದ್ರಕ್ಕೆ ಜಿಗಿದಿದ್ದರು. ಸುಮಾರು ಐದೂವರೆ ತಾಸಿನ ಕಾಲ ಸಮುದ್ರದಲ್ಲೇ ಇದ್ದು 3500 ಮೀ .ಈಜುವ ಮೂಲಕ ವಿನೂತನ ದಾಖಲೆಗೆ ಭಾಜನರಾದರು.
ಈ ಮೂಲಕ ಗಂಗಾಧರ್ ,ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಈ ದಾಖಲೆಗೆ ತೀರ್ಪುಗಾರರಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಮನೀಷ್ ವೈಷ್ಣಾಯ್ ಸಾಕ್ಷಿಯಾದರು.
ಗಂಗಾಧರ್ ಜಿ.ಕಡೆಕಾರು ಕಳೆದ ವರ್ಷ ಕಿದಿಯೂರು ಪಡೆಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಹಾಕಿ 1.4. ಕಿ.ಮೀಟರ್ ದೂರ ಬ್ರೆಸ್ಟ್ ಸ್ಟೋಕ್ ಶೈಲಿಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು.
ಅದಾಗಿ ಒಂದು ವರ್ಷದ ಬಳಿಕ ಮತ್ತೊಂದು ವಿಶ್ವದಾಖಲೆ ಮಾಡುವ ಮೂಲಕ ಯುವಜನತೆ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ್ದಾರೆ.ಇವತ್ತು ಸಮುದ್ರ ರಫ್ ಇದ್ದ ಕಾರಣ ,ಗಂಗಾಧರ್ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು.ಬೆಳಿಗ್ಗೆ ಏಳು ಗಂಟೆಗೆ ಸಮುದ್ರಕ್ಕೆ ಧುಮುಕಿದ ಗಂಗಾಧರ್ ,ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಡಕ್ಕೆ ಬಂದಾಗ ಅವರನ್ನು ಸ್ಥಳೀಯರು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಶುಭಾಶಯ ಕೋರಿದರು.
PublicNext
24/01/2022 08:36 pm