ಮಂಗಳೂರು: ರಾಜ್ಯ ಇಂಟಕ್, ಮೊಗವೀರ ಮಹಾಸಭಾ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತಿತರ ಸಂಘಟನೆಗಳ ಸಹಕಾರದೊಂದಿಗೆ ಏ. 30 ಹಾಗೂ ಮೇ 1ರಂದು ಚಿತ್ರಾಪುರ ಕಡಲ ತೀರದಲ್ಲಿ ʼಬೀಚ್ ಫೆಸ್ಟ್ ಸಂಭ್ರಮʼ ನಡೆಯಲಿದೆ ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.
ಇಂದು ಸಂಜೆ ಚಿತ್ರಾಪುರ ಬೀಚ್ ನಲ್ಲಿ ʼಬೀಚ್ ಫೆಸ್ಟ್ʼನ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. "ಏ.30 ಮತ್ತು ಮೇ 1ರಂದು ಕಾರ್ಮಿಕರಿಗಾಗಿ ಬೀಚ್ ಫೆಸ್ಟ್ ಮತ್ತು ಕಡಲ ತೀರದ ಆಟೋಟ ಸ್ಪರ್ಧೆ ನಡೆಯಲಿದೆ. 30ರಂದು ಸಾಮೂಹಿಕ ಯೋಗಾಭ್ಯಾಸ, ಗಾಳಿಪಟ ಸ್ಪರ್ಧೆ, ಆಹಾರೋತ್ಸವ, ಸರ್ಫಿಂಗ್, ಸಾಂಸ್ಕೃತಿಕೋತ್ಸವ, ಹಗ್ಗಜಗ್ಗಾಟ, ಕಬಡ್ಡಿ ಇತ್ಯಾದಿ ಜರುಗಲಿದ್ದು, ಸ್ಥಳೀಯರಲ್ಲದೆ ಜಿಲ್ಲೆ- ಹೊರಜಿಲ್ಲೆಯ ಜನರು, ಪ್ರವಾಸಿಗರೂ ಪಾಲ್ಗೊಳ್ಳಬಹುದು" ಎಂದರು.
ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತನಾಡಿ, "ಬೀಚ್ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ. ಆಹಾರೋತ್ಸವ ಬೇರೆ ಕಡೆಗಿಂತ ಭಿನ್ನವಾಗಿದ್ದು, ಸ್ಥಳೀಯ ಮಹಿಳೆಯರು ಶುಚಿ ರುಚಿ ಆಹಾರ ಖಾದ್ಯ ತಯಾರಿಸಿ ಬಡಿಸಲಿದ್ದಾರೆ" ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಯತೀಶ್ ಬೈಕಂಪಾಡಿ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ರತನ್ ಶೆಟ್ಟಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಮೊಗವೀರ ಸಭಾ ಗುರಿಕಾರ ಅಮರನಾಥ ಸುವರ್ಣ ಉಪಸ್ಥಿತರಿದ್ದರು.
Kshetra Samachara
29/03/2022 08:54 pm