ಪುತ್ತೂರು: ಇಂದಿನ ದಿನಗಳಲ್ಲಿ ಒಂದೆಡೆ ಬೇಕಾಬಿಟ್ಟಿ ಹೆಚ್ಚಾಗುತ್ತಿರುವ ವಿದ್ಯುತ್ ಬಿಲ್, ಇನ್ನೊಂದೆಡೆ ಸಣ್ಣಪುಟ್ಟ ಗಾಳಿ-ಮಳೆಗೂ ಗ್ರಾಮಾಂತರದಲ್ಲಿ ಕಡಿಮೆಯಾಗದ ವಿದ್ಯುತ್ ಸಮಸ್ಯೆ. ಆದರೆ, ಈ ಯಾವುದರ ಜಂಜಾಟವಿಲ್ಲದೆ ನೈಸರ್ಗಿಕವಾಗಿ ಹರಿಯುವ ನೀರಿನಲ್ಲಿ ಟರ್ಬೈನ್ ಮೂಲಕ ಕಳೆದ 17 ವರ್ಷಗಳಿಂದ ವಿದ್ಯುತ್ ತಯಾರಿಸುವ ಮೂಲಕ ವಿದ್ಯುತ್ ನಲ್ಲಿ ಆತ್ಮನಿರ್ಭರತೆ ಸಾಧಿಸಿದ್ದಾರೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಸುರೇಶ್.
ಸ್ವಂತ ಜಲ ವಿದ್ಯುತ್ ಘಟಕ ಸ್ಥಾಪಿಸಿ,17 ವರ್ಷಗಳಿಂದಲೂ ನಿರಂತರ ವಿದ್ಯುತ್ ತಯಾರಿಸುತ್ತಿದ್ದಾರೆ! ತನ್ನ ತೋಟದ 60 ಅಡಿ ಎತ್ತರದಲ್ಲಿ ಹರಿಯುವ ಹಳ್ಳದ ನೀರನ್ನೇ ಕೊಳವೆ ಮೂಲಕ ಟರ್ಬೈನ್ ಗೆ ಹರಿಸಿ 2 ಕೆ.ವಿ. ವಿದ್ಯುತ್ ಪಡೆಯುತ್ತಿದ್ದಾರೆ. 6 ಇಂಚು ಅಗಲದ ಕೊಳವೆ ಮೂಲಕ ನೀರನ್ನು ಹರಿಸಿ , 4 ಇಂಚು, 3 ಇಂಚು, 2.5 ಇಂಚು, 1.50 ಇಂಚಿನ ಪೈಪ್ ಜೋಡಿಸಿ, ನೀರಿನ ಹರಿವಿನ ರಭಸ ಹೆಚ್ಚಿಸಿ ಟರ್ಬೈನ್ ಗೆ 1 ಇಂಚಿನ ಪೈಪ್ ಮೂಲಕ ನೀರನ್ನು ಬಿಟ್ಟು ಟರ್ಬೈನ್ ನನ್ನು ವೇಗವಾಗಿ ತಿರುಗಿಸಲಾಗುತ್ತದೆ.
ಈ ಟರ್ಬೈನ್ ಗೆ ಬೆಲ್ಟ್ ಅಳವಡಿಸಿ ಡೈನಮೋ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಮನೆಗೆ ಬೇಕಾದ ಎಲ್ಲ ವಿದ್ಯುತ್ ಉಪಕರಣಕ್ಕೆ ಇದೇ ವಿದ್ಯುತ್ ಬಳಸುತ್ತಿದ್ದು, ವರ್ಷಕ್ಕೆ 9 ತಿಂಗಳು ಇದೇ ವಿದ್ಯುತ್ ನ್ನು ಸುರೇಶ್ ಉಪಯೋಗಿಸುತ್ತಿದ್ದಾರೆ. 50ರಿಂದ 60 ಸಾವಿರ ರೂ. ವೆಚ್ಚ ಮಾಡಿ ಅಳವಡಿಸಿದ ಈ ಟರ್ಬೈನ್ ಗೆ ಖರ್ಚು ಮಾಡಿದ ಹಣಕ್ಕಿಂತ ಎಷ್ಟೋ ಪಾಲು ಹಣವನ್ನು ವಿದ್ಯುತ್ ಬಿಲ್ ನಲ್ಲೇ ಉಳಿಸಿರುವ ಸುರೇಶ್, ತಮ್ಮಂತೆ ಇತರರೂ ಅವಕಾಶವಿದ್ದಲ್ಲಿ ಈ ರೀತಿಯ ಸೌಲಭ್ಯ ಅಳವಡಿಸಿದರೆ ವಿದ್ಯುತ್ ನಲ್ಲಿ ಸ್ವಾವಲಂಬಿಯಾಗಬಹುದು ಎನ್ನುತ್ತಾರೆ.
Kshetra Samachara
09/10/2021 06:00 pm