ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು, ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಿಂದಕ್ಕೆ ಉಳಿದರೂ ತುಳು ಭಾಷೆ, ಸಂಸ್ಕೃತಿ ಬೆಳವಣಿಗೆಗೆ ತೆರೆ ಹಿಂದೆ ಸಾಕಷ್ಟು ಪ್ರಯತ್ನ ನಡೆಯುತ್ತಿವೆ. ಆಸಕ್ತ ಯುವ ಮನಸ್ಸುಗಳು ಡಿಜಿಟಲ್ ತಂತ್ರಾಂಶ ಮೂಲಕವೂ ತುಳು ಭಾಷಾಭಿವೃದ್ಧಿಗೆ ಒಂದಷ್ಟು ಕೆಲಸ ಮಾಡುತ್ತಿವೆ. ಇದೀಗ ಮಂಗಳೂರಿನ ಪಿಯುಸಿ ವಿದ್ಯಾರ್ಥಿಯೊಬ್ಬ ತುಳು ಲಿಪ್ಯಂತರ ಸಾಫ್ಟ್‌ವೇರ್ ಟ್ರ್ಯಾನ್ಸ್ ಸ್ಕ್ರಿಪ್ಟ್ ಅಭಿವೃದ್ಧಿ ಪಡಿಸಿದ್ದಾನೆ.
ಹೌದು... ಜ್ಞಾನೇಶ್ ದೇರಳಕಟ್ಟೆ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿ 'ಗೇನಸಿರಿ' ಎಂಬ ತುಳು ಲಿಪ್ಯಂತರ ಸಾಫ್ಟ್‌ವೇರ್ ಟ್ರ್ಯಾನ್ಸ್ ಸ್ಕ್ರಿಪ್ಟ್ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ತುಳು ಪದಗಳನ್ನು ಕನ್ನಡ ಲಿಪಿಯಿಂದ ತುಳು ಲಿಪಿಗೆ, ಮಲೆಯಾಳಂ ಲಿಪಿಯಿಂದ ತುಳು ಲಿಪಿಗೆ ಸುಲಭವಾಗಿ ತರ್ಜುಮೆ ಮಾಡಬಹುದು. ಇದು ತುಳು ಲಿಪಿ ಕಲಿಯಬೇಕೆನ್ನುವ ಆಸಕ್ತರಿಗೆ, ತುಳು ಬರಹಗಾರರಿಗೆ, ತುಳು ಎಂಎ ಪದವೀಧರರಿಗೆ ಖಂಡಿತಾ ಸಹಕಾರಿಯಾಗಲಿದೆ.
ಗೂಗಲ್ ಗೆ ಹೋಗಿ, Jaitulunad.in ಎಂದು ಟೈಪ್ ಮಾಡಿ menu ವಿನಲ್ಲಿರುವ ಗೇನಸಿರಿಯನ್ನು ಕ್ಲಿಕ್ ಮಾಡಿದರೆ ಅಥವಾ Jaitulunad.in/genasiri ಎಂದು ಟೈಪಿಸಿ ಈ ತುಳು ಲಿಪ್ಯಂತರ ಸಾಫ್ಟ್‌ವೇರ್ ಟ್ರ್ಯಾನ್ಸ್ ಸ್ಕ್ರಿಪ್ಟ್ ಸುಲಭವಾಗಿ ಬಳಸಬಹುದು. ಬಳಕೆದಾರರು ತುಳು ಪದ ಬಳಸುವ ವೇಳೆ ಎರರ್ ಸಿಕ್ಕಿದ್ದಲ್ಲಿ ಇ-ಮೇಲ್ ಮಾಡಲು ಫಾರ್ಮ್ ಅನ್ನೂ ನೀಡಲಾಗಿದೆ. ಅದರಲ್ಲಿ ಹೆಸರು, ಈಮೇಲ್, ಯಾವ ಪದ ಎರರ್ ಬಂದಿದೆ, ಕನ್ನಡದಿಂದ ತುಳು ಅಥವಾ ಮಲೆಯಾಳಂನಿಂದ ತುಳುವಲ್ಲಿ ತಪ್ಪು ಕಂಡು ಬಂದಿದೆಯೇ ಎಂದು ಸ್ಪಷ್ಟವಾಗಿ ಬರೆದಲ್ಲಿ ಅದನ್ನು ಸರಿಪಡಿಸಲಾಗುತ್ತದೆ.
ನಗರದ ಕುತ್ತಾರು ನಿವಾಸಿ, ನಂತೂರಿನ ನಿಟ್ಟೆ ಪಿಯು ಕಾಲೇಜಿನ ವಿದ್ಯಾರ್ಥಿ ಜ್ಞಾನೇಶ್, ಜೈ ತುಳುನಾಡು ಸಂಘಟನೆ ಮೂಲಕ ಕೊರೊನಾ ಲಾಕ್ ಡೌನ್ ನಲ್ಲಿ ತುಳು ಲಿಪಿ ಬರೆಯಲು, ಓದಲು ಕಲಿತಿದ್ದರು. ಇದೀಗ ಇದೇ ಸಂಘಟನೆ ಪ್ರೋತ್ಸಾಹದಿಂದ ಈ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದಾರೆ. ಗೇನಸಿರಿಯನ್ನು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಬೆಂಗಳೂರಿನಲ್ಲಿ ಅನಾವರಣಗೊಳಿಸಿದ್ದಾರೆ. ಒಂದು ತಿಂಗಳ ಪ್ರಯತ್ನದಲ್ಲಿ ಈ ತಂತ್ರಾಂಶ ಅಭಿವೃದ್ಧಿ ಪಡಿಸಿದ ಜ್ಞಾನೇಶ್ ಮುಂದೆ ಹಿಂದಿ, ಇಂಗ್ಲಿಷ್ ಭಾಷೆಯನ್ನು ಈ ತಂತ್ರಾಂಶಕ್ಕೆ ಅಳವಡಿಸುವ ಪ್ರಯತ್ನದಲ್ಲಿದ್ದಾರಂತೆ.
PublicNext
10/07/2022 09:05 pm