ಬಂಟ್ವಾಳ: ಸಾಮಾನ್ಯವಾಗಿ ಮಳೆ ಬಂದಾಗ ಬೆಳೆಯನ್ನು ರಕ್ಷಿಸಿಕೊಳ್ಳುವುದು ಕೃಷಿಕನಿಗೆ ದೊಡ್ಡ ಸವಾಲು. ಇಂಥ ಸಂದರ್ಭಗಳಲ್ಲಿ ತೆಂಗು, ಅಡಕೆಯನ್ನು ಒಣಗಿಸಲು ಪ್ಲಾಸ್ಟಿಕ್ ಹೊದಿಕೆಗಳು, ಅಂಥ ರಚನೆಗಳನ್ನು ನಿರ್ಮಿಸುವುದನ್ನು ಹಿಂದೆಯೇ ಕಂಡಿದ್ದೇವೆ. ಆದರೆ ಈಗ ಅದರ ಸುಧಾರಿತ ರೂಪವೊಂದು ಚಾಲ್ತಿಯಲ್ಲಿದೆ. ಇದಕ್ಕೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಿಂದ ಸಹಾಯಧನವೂ ದೊರಕುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕೃಷಿಕರಿಂದ ಇದಕ್ಕೆ ಬೇಡಿಕೆಯೂ ಇದೆ. ಇದು ಸೌರ ಶಾಖಾ ಘಟಕ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸಹಯೋಗ ನೀಡುವ ಹಿನ್ನೆಲೆಯಲ್ಲಿ ಶಾಖ ಪೆಟ್ಟಿಗೆ ನಿರ್ಮಾಣಕ್ಕೆ 6.31 ಲಕ್ಷ ರೂ. ವೆಚ್ಚ ಆಗುತ್ತಿದ್ದು 2.28 ಲಕ್ಷ ರೂ. ಸಹಾಯಧನ ಇಲಾಖೆಯಿಂದ ದೊರಕುತ್ತದೆ. ದೊಡ್ಡ ಕೃಷಿಕರು ಏಕಾಂಗಿಯಾಗಿ ಇದನ್ನು ಅಳವಡಿಸಬಹುದಾದರೆ, ಸಣ್ಣ ಕೃಷಿಕರು ಗುಂಪು ರಚಿಸುವ ಮೂಲಕ ಸ್ವಸಹಾಯ ಕ್ರಮದ ಮೂಲಕ ಇದನ್ನು ಹೊಂದಲು ಸಾಧ್ಯ.
ಬಂಟ್ವಾಳ ತಾಲೂಕಿನಲ್ಲಿ ಇದನ್ನು ಮೊತ್ತಮೊದಲನೆಯದಾಗಿ ಅಳವಡಿಸಿದ್ದು ಪತ್ರಕರ್ತ, ಕೃಷಿಕ ಹಾಗೂ ತೆಂಗು ಬೆಳೆಗಾರ ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜಾ ಬಂಟ್ವಾಳ. ನರಿಕೊಂಬು ಗ್ರಾಮದಲ್ಲಿರುವ ಅವರ ಕೃಷಿ ಭೂಮಿಯಲ್ಲಿ 2018-19ರ ಸಾಲಿನಲ್ಲಿ ಇದನ್ನು ನಿರ್ಮಿಸಿದರು. ಕೃಷಿಯತ್ತ ಯುವಕರೂ ಚಿತ್ತ ಹರಿಸುತ್ತಿರುವ ಈ ಕಾಲಮಾನದಲ್ಲಿ ಸುಧಾರಿತ ಮಾದರಿಯ ಕೃಷಿ ಪದ್ಧತಿಗಳನ್ನು ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಗುಣಮಟ್ಟದ ಬೆಳೆಯನ್ನು ಪಡೆಯಲು ಸಾಧ್ಯ ಎಂಬುದಕ್ಕೆ ಸೌರಶಾಖ ಘಟಕ ನಿದರ್ಶನ ಎಂದವರು ತಿಳಿಸಿದರು.
Kshetra Samachara
28/09/2020 05:01 pm