ಮೂಡುಬಿದಿರೆ: ಮೂಡುಬಿದಿರೆಯಿಂದ 10 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ಪ್ರಕೃತಿಯ ಮಡಿಲಲ್ಲಿ ನದಿ, ಬೆಟ್ಟ, ಗುಡ್ಡ, ಬಯಲು ಪ್ರದೇಶಗಳಿಂದ ಕೂಡಿದ್ದು, ದೇವರ ಬೆಟ್ಟ ಮತ್ತು ಹೊಸಮರಾಯ ಬೆಟ್ಟಗಳೆಂಬ ಎರಡು ಬೃಹತ್ ಬೆಟ್ಟಗಳ ಮಡಿಲಲ್ಲೇ ಈ ಪುಣ್ಯ ಕ್ಷೇತ್ರವಿದೆ. ಇರುವೈಲು ಕ್ಷೇತ್ರದ ಮುಂಭಾಗದ ಪ್ರದೇಶವನ್ನು ದೇವಸ ಅಂತಲೂ, ದೇವಾಲಯದ ಹಿಂಭಾಗದ ಪ್ರದೇಶವು ಸಂಕೇಸವೆಂದು ಪ್ರಸಿದ್ಧವಾಗಿ ಮುಂದೆ ಈ ಎರಡು ಬಯಲು ಪ್ರದೇಶಗಳಿರುವುದರಿಂದಲೇ ಈ ಊರನ್ನು ಇರುವೈಲು ಎಂದು ಕರೆಯಲಾಯಿತೆಂಬ ನಂಬಿಕೆ ಇದೆ.
ಮೂಡುಬಿದಿರೆಯ ಚೌಟರ ಸೀಮೆಗೆ ಒಳಪಟ್ಟ ಇರುವೈಲಿನ ದೇವಗಿರಿ, ವಜ್ರಗಿರಿ, ಕನಕಗಿರಿ ಎಂಬ ಪರ್ವತಗಳ ಮಧ್ಯದಲ್ಲಿ ಇರುವ ಈ ದೇಗುಲವು ಪುರಾತನದಲ್ಲಿ ಪ್ರಸ್ತುತ ದೇವಾಲಯವಿರುವ ಪೂರ್ವಕ್ಕೆ ದೇವಗಿರಿಯಲ್ಲಿ ಇತ್ತು ಎಂಬುದನ್ನು ದೇವಾಲಯದ ಅವಶೇಷ, ಶಿಲಾ ಶಾಸನಗಳಿಂದ ತಿಳಿಯಬಹುದಾಗಿದೆ.
ವಯೋವೃದ್ಧರು ಭಕ್ತರು ಆಗಿದ್ದ ಅಂದಿನ ಅರ್ಚಕರು ತನ್ನ ಹಾಗೂ ಭಕ್ತರ ಕಷ್ಟದ ಬಗ್ಗೆ ದೇವಿಯ ಸನ್ನಿಧಿಯಲ್ಲಿ “ಅಮ್ಮಾ ಸಕಲ ಭಕ್ತರಿಗೆ ಅನುಕೂಲವಾಗುವಂತೆ ಈ ಗಿರಿಯಿಂದ ಕೆಳಗೆ ಇಳಿದು ನೆಲೆಸಬೇಕು” ಎಂದು ಪ್ರಾರ್ಥಿಸಿಕೊಂಡರಂತೆ. ಇದರ ಫಲವಾಗಿ ಅದೇ ದಿನ ರಾತ್ರಿ ಅರ್ಚಕರಿಗೆ ಹಾಗೂ ಚೌಟ ಅರಸರಿಗೆ ದೇವಿಯು ಸ್ವಪ್ನದಲ್ಲಿ ಕಾಣಿಸಿ “ನಿಮ್ಮೆಲ್ಲರ ಅಭಿಷ್ಟೆಯಂತೆ ಭಕ್ತರ ಉದ್ಧಾರಕ್ಕಾಗಿ ಕಾಸಿಕಾವನದಲ್ಲಿ ಉದ್ಭವಿಸುತ್ತೇನೆ ಎಂದು ಅಭಯವಾಯಿತಂತೆ. ಮುಂಜಾನೆ ಸರೋವರವನ್ನು ಕಂಡಾಗ ಹುಲಿ-ದನ ಒಟ್ಟಿಗೆ ಮೇಯುವ ದೃಶ್ಯದೊಂದಿಗೆ ಶ್ರೀದೇವಿಯು ಲಿಂಗರೂಪದಲ್ಲಿ ಉದ್ಭವವಾಗಿದ್ದರಂತೆ. ಶ್ರೀ ಕ್ಷೇತ್ರದಲ್ಲಿ ಎರಡನೇ ಬಾರಿ ದೇವಿ ಉದ್ಭವಿಸಿರುವ ಕಾರಣ ತುಳು ಭಾಷೆಯಿಂದ "ಇರುವಾರ ಉಂಡತಿನಾರು" ಇತಿಹಾಸದಲ್ಲಿ ಇರುವೈಲು ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಈ ಕ್ಷೇತ್ರದ ವಿಶೇಷತೆಯೆಂದರೆ ಯಾವುದೇ ಕೆಲಸ ಕಾರ್ಯವಾಗಲಿ ಶಿಕ್ಷಣ, ಉದ್ಯೋಗ, ಕಂಕಣ ಭಾಗ್ಯ, ಸಂತಾನ ಭಾಗ್ಯವಿಲ್ಲದವರು ಭಕ್ತಿಯಿಂದ ಹರಕೆಯನ್ನು ಹೊತ್ತು ಬೇಡಿಕೊಂಡರೆ ಇಷ್ಟಾರ್ಥಗಳು ಸಿದ್ಧಿಸುತ್ತದೆ ಎಂಬುದು ಇಲ್ಲಿ ಆಗಮಿಸುವ ಭಕ್ತರ ನಂಬಿಕೆ.
ಇಲ್ಲಿ ವಿಶೇಷವಾಗಿ ಮಾಡ್ಲಾಯಿ ಶಕ್ತಿಯಿದ್ದು, ಈ ಶಕ್ತಿಗೆ ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ಸಾವಿರ ಕಂಗಿನ ಗರಿಯ ಹಾಳೆಯಿಂದ ಅಲಂಕಾರ ಮಾಡಿ ಜಾತ್ರೆಯ ಕೊನೆಯ ದಿನದಂದು ಶ್ರೀ ದುರ್ಗಾಪರಮೇಶ್ವರಿ ದೇವಿ ಹಾಗೂ ಮಾಡ್ಲಾಯಿ ದೈವವು ಭೇಟಿಯಾಗುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರೇ ಅಧಿಕ.
ದೇವಾಲಯದ ಪ್ರಧಾನ ದೈವ ಹೊಸಮರಾಯ ದೈವವಾಗಿದೆ. ಶ್ರೀ ಕ್ಷೇತ್ರದಲ್ಲಿ ದೇವಿಯ ಅಭಯದಂತೆ ಯಕ್ಷಗಾನ, ಭಜನೆ, ಲಲಿತಕಲೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮುಖೇನ ದೇವಿಯನ್ನು ಆರಾಧಿಸಿಕೊಂಡು ಬಂದರೆ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ ಸಂಕಷ್ಟವನ್ನು ದೂರ ಮಾಡುತ್ತಾಳೆ ಎಂಬುದು ಇಲ್ಲಿ ಬರುವ ಭಕ್ತರ ಅಗಾಧ ನಂಬಿಕೆ.
Kshetra Samachara
09/10/2022 10:22 am