ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿಶ್ವನಾಥ ಪಂಜಿಮೊಗರು
ಮಂಗಳೂರು: ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ, ಅಸ್ಸಾಂ ದುರ್ಗಾ ಪೂಜೆಗೆ ಖ್ಯಾತಿ ಹೊಂದಿರುವ ರಾಜ್ಯಗಳು. ಇಲ್ಲಿನ ದುರ್ಗೋತ್ಸವ ಅಥವಾ ಶರದೋತ್ಸವ ಎಂದು ಕರೆಯಲ್ಪಡುವ ದುರ್ಗಾಪೂಜೆಯು 10 ದಿನಗಳ ಕಾಲ ಆಚರಣೆಯಲ್ಲಿರುವ ಹಬ್ಬವಾಗಿದೆ. ಇದೇ ರೀತಿಯ ನವದುರ್ಗೆಯರ ಆರಾಧನೆಯು ಶ್ರೀಕ್ಷೇತ್ರ ಕುದ್ರೋಳಿಯಿಂದ ಆಯೋಜನೆಗೊಳ್ಳುತ್ತಿರುವ ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾಗಿದೆ. ಈ ನವದುರ್ಗೆಯರ ಆರಾಧನೆಗೆ ಪಶ್ಚಿಮ ಬಂಗಾಳದ ದುರ್ಗಾ ಪೂಜೆಯೇ ಸ್ಪೂರ್ತಿಯಂತೆ.
ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿ ರೂವಾರಿ ಬಿ.ಜನಾರ್ದನ ಪೂಜಾರಿಯವರು ಕೇಂದ್ರದ ಸಹಾಯಕ ವಿತ್ತ ಸಚಿವರಾಗಿದ್ದ ಕಾಲದಲ್ಲಿ ವಿವಿಧ ರಾಜ್ಯಗಳಿಗೆ ಸಂಚಾರ ಮಾಡುತ್ತಿದ್ದರು. ಒಮ್ಮೆ ದಸರಾದ ಸಂದರ್ಭ ಅವರಿಗೆ ಪಶ್ಚಿಮ ಬಂಗಾಳಕ್ಕೆ ಹೋಗಬೇಕಾಯಿತು. ಈ ವೇಳೆ ಅಲ್ಲಿನ ದುರ್ಗೋತ್ಸವವನ್ನು ನೋಡಿದ್ದಾರೆ. ಅಲ್ಲಿನ ನವದುರ್ಗೆಯರನ್ನು ಕಂಡ ಅವರು ಶ್ರೀಕ್ಷೇತ್ರ ಕುದ್ರೋಳಿಯಲ್ಲೂ ದಸರಾ ಸಂದರ್ಭ ಶಾರದೆಯೊಂದಿಗೆ ನವದುರ್ಗೆಯರನ್ನೂ ಪ್ರತಿಷ್ಠಾಪಿಸುವ ಸಂಕಲ್ಪ ಕೈಗೊಂಡರು. 1930ರಿಂದ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ದಸರಾ ಸಂದರ್ಭ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯುತ್ತಿದ್ದರೆ, 1990ರಿಂದ ಶಾರದಾ ಮಾತೆಯೊಂದಿಗೆ ನವದುರ್ಗೆಯರು, ಶ್ರೀಮಹಾಗಣಪತಿ ಸಹಿತ ಪ್ರತಿಷ್ಠಾಪನೆ ಮಾಡುವ ಕಾರ್ಯವೂ ಕಾರ್ಯಗತಗೊಂಡಿತು.
ಮತ್ತೊಂದು ವಿಶೇಷವೆಂದರೆ ಇಲ್ಲಿ ನವದುರ್ಗೆಯರೊಂದಿಗೆ ಆದಿಶಕ್ತಿಯೂ ಆರಾಧನೆಗೊಳ್ಳುತ್ತಿದ್ದಾಳೆ. ಇದಕ್ಕೂ ಒಂದು ಹಿನ್ನೆಲೆಯಿದೆ. ದೇಶದ ಸ್ವಾತಂತ್ರ್ಯ ಮಹೋತ್ಸವದ ಸುವರ್ಣ ಸಂಭ್ರಮಾಚರಣೆಯ ವರ್ಷ ಬಿ.ಜನಾರ್ದನ ಪೂಜಾರಿಯವರಿಗೆ ನೂತನ ಕಲ್ಪನೆಯೊಂದು ಹೊಳೆಯಿತು. ಈ ಮೂಲಕ ಅವರು ಭಾರತ ಮಾತೆಯನ್ನು ಆದಿಶಕ್ತಿ ಸ್ವರೂಪದಲ್ಲಿ ಆರಾಧಿಸುದನ್ನು ಅಂದಿನಿಂದ ಆಚರಣೆಗೆ ತಂದರು. ಇದೀಗ ನವದುರ್ಗೆಯರಾಧನೆ ಆರಂಭಗೊಂಡು 32 ವರ್ಷವಾದರೆ, ಆದಿಶಕ್ತಿಯ ಆರಾಧನೆಗೆ 25 ವರ್ಷವಾಯಿತು. ಒಟ್ಟಿನಲ್ಲಿ ಶ್ರೀಕ್ಷೇತ್ರ ಕುದ್ರೋಳಿಯು ಕರಾವಳಿಯಲ್ಲಿ ದಸರಾ ಮಹೋತ್ಸವಕ್ಕೆ ಹೊಸಭಾಷ್ಯವನ್ನು ಬರೆದು ಮಂಗಳೂರು ದಸರಾವಾಗಿ ಇತಿಹಾಸ ಬರೆದಿದೆ.
PublicNext
02/10/2022 03:30 pm