ಕುಂದಾಪುರ: ಉಡುಪಿಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ನಿರ್ಮಾಣವಾಗುತ್ತಿದೆ. ನಾಲ್ಕು ಶತಮಾನ ಕಂಡ ಹಳೆಯ ಬ್ರಹ್ಮರಥದ ಕೆತ್ತನೆ, ಮರ, ವಾಸ್ತು , ಕಾಷ್ಟಶಿಲ್ಪಗಳ ರಚನೆ ಹೀಗೆ ಯಾವುದರಲ್ಲೂ ಬದಲಾಗದ ಮತ್ತು ಹಳೆಯ ರಥದ ಪಡಿಯಚ್ಚಿನಂತೆ ಹೊಸ ಬ್ರಹ್ಮರಥ ನಿರ್ಮಿಸಲಾಗಿದೆ.
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರಥೋತ್ಸವ ನಡೆಯುತ್ತವೆ. ಈ ವೇಳೆ ಬ್ರಹ್ಮರಥವನ್ನು ಎಳೆಯುವ ಸಂಪ್ರದಾಯವಿದ್ದು ಇದೀಗ ಸೇವಾ ರೂಪದಲ್ಲಿ ನೂತನ ರಥ ಸಮರ್ಪಣೆಗೆ ಸಿದ್ಧವಾಗುತ್ತಿದೆ. ಹಳೆಯ ರಥದ ಗಾತ್ರವನ್ನೇ ಹೊಂದಿರುವ ಈ ಸುಂದರ ಬ್ರಹ್ಮರಥ ನಿರ್ಮಾಣ ಕಾರ್ಯ 2023 ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಕೊಲ್ಲೂರು ದೇವಸ್ಥಾನ ಹಾಗೂ ಮುರುಡೇಶ್ವರದ ಉದ್ಯಮಿ ಆರ್ ಎನ್ ಶೆಟ್ಟಿ ಅವರ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದ್ದು ಶೆಟ್ಟಿ ಅವರ ಪುತ್ರ ಸುನಿಲ್ ಈ ಬ್ರಹ್ಮ ರಥವನ್ನು ಸೇವಾ ರೂಪದಲ್ಲಿ ನಿರ್ಮಿಸಿ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ದಿವಂಗತ ಆರ್ ಎನ್ ಶೆಟ್ಟಿ ಗೆಸ್ಟ್ ಹೌಸ್ ಇದ್ದು, ಭಕ್ತರಿಗೆ ಅನುಕೂಲ ನೀಡುತ್ತಿದೆ. ಇದೀಗ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದೆ. ರಥ ನಿರ್ಮಾಣದಲ್ಲಿ ವಿಶೇಷ ನೈಪುಣ್ಯತೆಯನ್ನು ಪಡೆದಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣವಾಗುತ್ತಿದೆ.
Kshetra Samachara
29/08/2022 09:12 pm