ವಿಟ್ಲ: ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ನಾಗರ ಪಂಚಮಿ ಮಹೋತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಶ್ಲೇಷ ಬಲಿಪೂಜೆ ಮಂಗಳವಾರ ನಡೆಯಿತು.
ಈ ಸಂದರ್ಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ರಂಗಪೂಜೆಗಳು ನೆರವೇರಿದವು. ನಾಗರಪಂಚಮಿಯ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಮಾನವೀಯ ಮೌಲ್ಯ ವೃದ್ಧಿಸಲು ನಾಗರಪಂಚಮಿಯಂಥ ಆಚರಣೆ ಅಗತ್ಯ. ನಮ್ಮ ಮಣ್ಣಿಗೂ ದೇವರಿಗೂ ಇರುವ ಸಂಬಂಧಗಳನ್ನು ಆಚರಣೆಗಳು ತೋರಿಸಿಕೊಡುತ್ತವೆ. ಪ್ರಕೃತಿಯ ಉಳಿವಿಗೆ ನಾಗಾರಾಧನೆ ಅಗತ್ಯ ಎಂದರು. ಅಮೃತತ್ವವನ್ನು ಪಡೆಯುವ ಕಡೆಗೆ ನಾವು ಸಾಗಬೇಕು ಎಂದ ಶ್ರೀಗಳು, ನಮ್ಮ ನಂಬಿಕೆ ನಮ್ಮನ್ನು ನಡೆಸುತ್ತದೆ. ಇಹಪರದ ಸುಖಕ್ಕೆ ಧರ್ಮ ರಹದಾರಿ. ಎಲ್ಲರೂ ಒಳ್ಳೆಯದಾಗಲಿ ಎನ್ನುವುದು ಭಾರತೀಯ ಸಂಸ್ಕೃತಿ ಎಂದರು.
ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಆರಾಧ್ಯ ದೇವರಿಗೆ ಮಹಾಪೂಜೆ, ಶ್ರೀ ಗಣಪತಿ ಹವನ, ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿಪೂಜೆ, ಕಲ್ಪೋಕ್ತ ಪೂಜೆ ನಡೆದವು. ರಾತ್ರಿ ಭಜನೆ, ರಂಗಪೂಜೆ, ಮಹಾಪೂಜೆ ನಡೆಯಿತು.
Kshetra Samachara
02/08/2022 07:06 pm