ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದಲ್ಲಿ‌ ತಾರಕಕ್ಕೇರಿದ ನಾಗನಕಟ್ಟೆ ವಿವಾದ

ಪುತ್ತೂರು: ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ನಿರ್ಮಿಸಿದ ನಾಗನ ಕಟ್ಟೆ ವಿಚಾರ ಇದೀಗ ವಿವಾದಕ್ಕೆಡೆ ಮಾಡಿದೆ.

ದ.ಕ. ಜಿಲ್ಲೆ ಪುತ್ತೂರು ತಾಲೂಕಿನ ನರಿಮೊಗರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗನ ಕಟ್ಟೆಯನ್ನು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಮಿಸಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ಗೊಂದಲ ಸೃಷ್ಟಿಯಾಗಿದೆ.

ನಿರ್ಮಾಣ ಹಂತದಲ್ಲಿರುವ ನಾಗನ ಕಟ್ಟೆ ಮರು ನಿರ್ಮಿಸುವಂತೆ ಕೆಲ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಇದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಗ್ರಾಮಸ್ಥರ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿದೆ. ಪುರಾತನ ಐತಿಹ್ಯದ ಈ ದೇವಸ್ಥಾನದಲ್ಲಿ ನಾಗನ ಕಟ್ಟೆ ಹಾಗೂ ಪುಷ್ಕರಣಿ ನಿರ್ಮಾಣ ಬಗ್ಗೆ ಇತ್ತೀಚೆಗೆ ವ್ಯವಸ್ಥಾಪನಾ ಸಮಿತಿ ಅಷ್ಟಮಂಗಲ ಪ್ರಶ್ನೆ ಕೈಗೊಂಡಿತ್ತು.

ಆದರೆ, ಅಷ್ಟಮಂಗಲದಲ್ಲಿ ಹೇಳಿದಂತೆ ಯಾವುದೇ ನಿಯಮ ಪಾಲಿಸದೆ, ವ್ಯವಸ್ಥಾಪನಾ ಸಮಿತಿ ತಮ್ಮಿಷ್ಟದಂತೆ ನಾಗನ ಕಟ್ಟೆ ನಿರ್ಮಿಸುತ್ತಿದೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಆರೋಪ ಅಲ್ಲಗಳೆದಿರುವ ವ್ಯವಸ್ಥಾಪನಾ ಸಮಿತಿ , ಅಷ್ಟಮಂಗಲ ಪ್ರಶ್ನೆಯಲ್ಲಿ ಜ್ಯೋತಿಷ್ಯರು ಸೂಚಿಸಿದ ಎಲ್ಲ ನಿಯಮ ಪಾಲಿಸಿಯೇ ನಾಗನ ಕಟ್ಟೆ ನಿರ್ಮಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನ, ಧಾರ್ಮಿಕ ದತ್ತಿ ಇಲಾಖೆಯಡಿ ಬಂದ ಬಳಿಕ ಲೆಕ್ಕಪತ್ರ ಸಮರ್ಪಕವಾಗಿ ನಿರ್ವಹಿಸಿಲ್ಲ. ಈಗಿನ ವ್ಯವಸ್ಥಾಪನಾ ಸಮಿತಿ ಇದೀಗ ಲೆಕ್ಕಪತ್ರ ಪರಿಶೋಧನೆಗೆ ಕೈ ಹಾಕಿರುವುದು ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ದೂರಿದ್ದಾರೆ.

ಈ ಮಧ್ಯೆ ನಾಗನ ಕಟ್ಟೆ ನಿರ್ಮಾಣದಲ್ಲಿ ಯಾವ ರೀತಿ ಲೋಪವಾಗಿದೆ ಎಂಬ ವಿಚಾರ ಮನಗಾಣಲು ಮತ್ತೆ ಪ್ರಶ್ನೆ ಚಿಂತನೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಇದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ. ಅಂತೂ ನಾಗನ ಕಟ್ಟೆ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

Edited By : Nagesh Gaonkar
PublicNext

PublicNext

24/06/2022 04:20 pm

Cinque Terre

35.06 K

Cinque Terre

0