ಕಡಬ: ತುಳುನಾಡಿನಲ್ಲಿ ಪುರುಷ ವೇಷ ಧರಿಸಿ ಮನೆ- ಮನೆಗೆ ತೆರಳಿ ಧಾರ್ಮಿಕ ಜಾಗೃತಿಯೊಂದಿಗೆ ಗ್ರಾಮದ ಆರಾಧನಾ ಕೇಂದ್ರಗಳ ಆರ್ಥಿಕ ಚೈತನ್ಯಕ್ಕೆ ಧನ ಸಂಗ್ರಹಿಸುವ ಬಲು ಅಪರೂಪದ ಪದ್ಧತಿಯೊಂದು ಕಡಬ ತಾಲೂಕಿನ ಆಲಂಕಾರು ಗ್ರಾಮದ ಬುಡೇರಿಯಾ ಬೈಲಿನಲ್ಲಿ ಇಂದಿಗೂ ಜೀವಂತವಾಗಿದೆ.
80ರ ದಶಕದಲ್ಲಿ ಈ ಭಾಗದ ಹಿರಿಯರು ಗ್ರಾಮದ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಂಕಲ್ಪ ತೊಟ್ಟರು. ಈ ವೇಳೆ ಆರ್ಥಿಕತೆ ಬಲ ಪಡಿಸಲು ಧನ ಸಂಗ್ರಹದ ಮೂಲಕ್ಕಾಗಿ ಚಿಂತನೆ ನಡೆಸಿದಾಗ ಪುರುಷ ವೇಷ ಧರಿಸಿ ಮನೆ- ಮನೆಗೆ ತೆರಳಿ ಹಣ ಸಂಗ್ರಹಿಸುವ ಯೋಜನೆ ಹೊಳೆಯಿತು. ಅಂದಿನಿಂದಲೂ ಊರಿನ ಯುವಕರು ಉತ್ಸಾಹದಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯ ಮುಂದುವರಿಸುತ್ತಿದ್ದಾರೆ.
ಏನಿದು ಪುರುಷ ವೇಷ ತಂಡ?: ನಾನಾ ವೇಷ ಧರಿಸಿದ 8 ಮಂದಿಯ ತಂಡ ಮನೆ- ಮನೆಗೆ ತೆರಳಿ ತಮ್ಮ ವೇಷಕ್ಕೆ ತಕ್ಕಂತೆ ನರ್ತಿಸುತ್ತಾರೆ. ತಂಡದಲ್ಲಿ ದೇವರ ಮೂರ್ತಿ ಹೊರುವವ, ದೈವ ಪರಿಚಾರಕ, ಅರ್ಚಕ, ಮುಸ್ಲಿಂ, ಸ್ತ್ರೀ ವೇಷಧಾರಿ, ಇಬ್ಬರು ಬೈದ್ಯರ್ ವೇಷಧಾರಿಗಳು, ಅರ್ಚಕರ ಸಹಾಯಕ ಇರುತ್ತಾರೆ. ತಂಡದೊಂದಿಗೆ ಇನ್ನಿತರ ಪೋಷಕ ವೇಷಧಾರಿಗಳೂ ಇರುತ್ತಾರೆ. ರಾತ್ರಿ ವೇಳೆ ಚೆಂಡೆ, ವಾಲಗ ಸದ್ದಿನೊಂದಿಗೆ ತಿರುಗಾಟ ನಡೆಯುತ್ತದೆ.
ಈ ವೇಳೆ ಪ್ರತಿ ಮನೆಯವರು ನೀಡುವ ಹಣ ಮತ್ತಿತರ ವಸ್ತು ಸ್ವೀಕರಿಸಿ, ಬಳಿಕ ಗ್ರಾಮದ ದೈವಸ್ಥಾನಕ್ಕೆ ಒಪ್ಪಿಸಲಾಗುತ್ತದೆ.
ತಿರುಗಾಟದ ಕೊನೆ ದಿನ ನಿಗದಿಪಡಿಸಿದ ಮನೆಯೊಂದರಲ್ಲಿ ಪೂಜಾ ಕೈಂಕರ್ಯ ನಡೆಯುತ್ತದೆ. ಈ ವೇಳೆ ಪ್ರತಿ ವೇಷಧಾರಿ ಕದ್ರಿ ದೇವಸ್ಥಾನದಿಂದ ತಂದ ತೀರ್ಥ ಸೇವಿಸಿ ವೇಷ ವಿಸರ್ಜಿಸುತ್ತಾರೆ.
ಎಲ್ಲ ವೇಷಧಾರಿಗಳು ಫಲಾಪೇಕ್ಷೆಯಿಲ್ಲದೆ ಭಾಗಿಯಾಗಬೇಕು. ಕೊನೆಯಲ್ಲಿ ಪೂಜೆ ಮುಗಿದ ನಂತರ ಪ್ರತಿ ವೇಷಧಾರಿಗೆ ತಾನು ಭಾಗವಹಿಸಿದ ದಿನ ಲೆಕ್ಕಾಚಾರದಲ್ಲಿ ಒಂದು ಕೆ.ಜಿ. ಯಂತೆ ಅವಲಕ್ಕಿ ನೀಡಲಾಗುತ್ತದೆ. ಇದನ್ನು ಸಂಬಳ ಎಂದೇ ಪರಿಗಣಿಸಲಾಗುತ್ತದೆ. ಬುಡೇರಿಯಾಬೈಲಿನ 150 ಮನೆಗಳಿಗೆ ಪ್ರತಿವರ್ಷ ಈ ವೇಷಧಾರಿಗಳು ತಿರುಗಾಟ ನಡೆಸುತ್ತಾರೆ.
PublicNext
15/06/2022 01:04 pm