ಮಂಗಳೂರು: ನಗರದ ಮಳಲಿ ಮಸೀದಿಯಲ್ಲಿ ದೈವಸಾನಿಧ್ಯ ಗೋಚರ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇಂದು ತಾಂಬೂಲ ಪ್ರಶ್ನಾಚಿಂತನೆಯನ್ನು ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಇರಿಸಿತ್ತು. ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ ಬೆಳಗ್ಗೆ 9:05ರಿಂದ 10:30 ಗಂಟೆಗೆ ಮುಕ್ತಾಯವಾಗಿದೆ.
ಆ ಬಳಿಕ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಮಾತನಾಡಿ, ಈ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ದೈವಸಾನಿಧ್ಯವಿತ್ತೇ, ಪೂರ್ವದಲ್ಲಿ ಯಾವ ರೀತಿ ಆರಾಧನೆ ನಡೆಯುತ್ತಿತ್ತು ಎಂಬ ನಿಟ್ಟಿನಲ್ಲಿ ನಾವು ಇಂದು ತಾಂಬೂಲ ಪ್ರಶ್ನೆ ಇರಿಸಿದ್ದೇವೆ. ಈ ನಿಟ್ಟಿನಲ್ಲಿ ಇಲ್ಲಿ ಶೈವ ಆರಾಧನೆ ಇತ್ತು ಎಂದು ಗೋಚರವಾಗಿದೆ. ಆದರೆ ಕೂಲಂಕಷ ಚರಿತ್ರೆಯನ್ನು ಅರಿಯಲು ತಾಂಬೂಲ ಪ್ರಶ್ನಾಚಿಂತನೆಯಿಂದಲೇ ಸಾಧ್ಯವಿಲ್ಲ. ಅದಕ್ಕಾಗಿ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಬೇಕಾಗಿದೆ.
ಇಲ್ಲಿ ಪೂರ್ವದಲ್ಲಿ ಗುರುಮಠದ ಅಧೀನದಲ್ಲಿ ಶೈವ ಆರಾಧನೆಯ ಸಾನಿಧ್ಯವಿತ್ತು ಎಂದು ತೋರಿ ಬಂದಿದೆ. ಅದೇ ತರಹದಲ್ಲಿ ಇಲ್ಲಿ ಆರಾಧನೆಗೊಂಡ ಉಪಾಧಿಯಾಗಿ ಕೆಲವೊಂದು ವಸ್ತುಗಳು ಕೆಲವು ಮಠಗಳಲ್ಲಿ, ದೇವಾಲಯಗಳಲ್ಲಿ ಆರಾಧನೆ ಗೊಳ್ಳತ್ತಿವೆ ಎಂದು ಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಾನಿಧ್ಯದ ಜೀರ್ಣೋದ್ಧಾರ ಆಗಬೇಕು. ಇದು ಆದಲ್ಲಿ ಈ ಗ್ರಾಮವೂ ಅಭಿವೃದ್ಧಿ ಆಗಲಿದೆ. ಯಾರಿಗೂ ತೊಂದರೆ ಆಗದಂತೆ ಈ ಸಾನಿಧ್ಯ ಜೀರ್ಣೋದ್ಧಾರ ಆಗಬೇಕು. ಇದಕ್ಕಾಗಿ ಎಲ್ಲರ ಸಹಕಾರ, ಪ್ರಾರ್ಥನೆ ಅಗತ್ಯ ಎಂದು ಹೇಳಿದರು.
PublicNext
25/05/2022 12:05 pm