ಉಳ್ಳಾಲ: ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಾ.ಹೆ.66ರ ದೇವಿಪುರ ಶ್ರೀ ರಾಮ ಭಜನಾ ಮಂದಿರದ ಬಳಿ ಶ್ರೀ ದೇವಿಯ ಭಕ್ತ ನಾರ್ಲ ಹೊಸಮನೆ ನಿವಾಸಿ ಮುಂಬೈಯ ಡಿ.ಎಸ್.ರಬ್ಬರ್ ಇಂಡಸ್ಟ್ರೀಸ್ ಸಂಸ್ಥಾಪಕ ಭಾಸ್ಕರ ಶೆಟ್ಟಿಯವರು ಶ್ರೀ ದೇವಿಗೆ ನಿರ್ಮಿಸಿದ ಶಿಲಾಮಯ ಮಹಾದ್ವಾರ ಸಮರ್ಪಣಾ ಕಾರ್ಯ ಮೇ.8ರಂದು ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋಹನ್ ದಾಸ್ ನೆತ್ತಿಲಬಾಳಿಕೆ ತಿಳಿಸಿದರು.
ಗುರುವಾರ ದೇವಸ್ಥಾನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ ನಡೆದಿದ್ದು ಅದೇ ದಿನ ಮಹಾದ್ವಾರ ಸಮರ್ಪಿಸಬೇಕಿತ್ತು. ಆದರೆ ಕೆಲಸ ಪೂರ್ಣಗೊಂಡು ಸುಂದರವಾಗಿ ಸಿದ್ಧಗೊಳ್ಳಬೇಕೆನ್ನುವ ನೆಲೆಯಲ್ಲಿ ಈ ತಿಂಗಳು ಸಮರ್ಪಿಸಲಾಗುತ್ತಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ಬೆಳಗ್ಗೆ 9:00 ಗಂಟೆಗೆ ಚಂಡಿಕಾಯಾಗ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, 1:00ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ಮೇ. 8ರಂದು ಬೆಳಗ್ಗೆ 9ಗಂಟೆಗೆ ಮಹಾದ್ವಾರ ಕಲಶಾಭಿಷೇಕ, ಸಂಜೆ 5:30ಕ್ಕೆ ಶಿಲಾಮಯ ಮಹಾದ್ವಾರ ಸಮರ್ಪಣೆ, ಬಳಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣರವರು ಮಹಾದ್ವಾರವನ್ನ ಉದ್ಘಾಟಿಸಿ,ಒಡಿಯೂರು ಶ್ರೀಗಳಾದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ,ಶ್ರೀ ದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಉಷಾ ಬಿ.ಶೆಟ್ಟಿ ನಾರ್ಲ ತಲಪಾಡಿ, ಹರ್ಷಿತ್ ಬಿ.ಶೆಟ್ಟಿ, ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ರಾಮ್ ಮನೋಹರ್ ರೈ, ಪ್ರಧಾನ ಅರ್ಚಕ ಗಣೇಶ್ ಭಟ್, ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ,ಜಯರಾಜ್ ಸಾಲ್ಯಾನ್, ದಾಮೋದರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
05/05/2022 11:06 pm