ಸುಬ್ರಹ್ಮಣ್ಯ: ಕುಕ್ಕೆ ಸುಬ್ರಮಣ್ಯದಲ್ಲಿ ಇತ್ತೀಚಿಗೆ ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೂ ರಜೆ ಇರೋದರಿಂದ, ಇತ್ತೀಚಿಗೆ ರಜಾ ದಿನಗಳಲ್ಲಿ ಕುಕ್ಕೆಯಲ್ಲಿ ರಾತ್ರಿ ವಸತಿಗೆ ರೂಮ್ ಸಿಗದೇ ಭಕ್ತರು ರಸ್ತೆಯಲ್ಲೇ ಮಲಗುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಪ್ರಕಟಣೆ ಹೊರಡಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಹಾಗೂ ಖಾಸಗಿಯಾಗಿ ಹಲವು ವಸತಿ ಗೃಹಗಳಿವೆ. ದೇವಸ್ಥಾನ ಸಭಾಂಗಣ, ಹಳೆ ಪ್ರಾಥಮಿಕ ಶಾಲಾ ಕಟ್ಟಡಗಳೂ ಇದೆ. ಆದರೂ ಇತ್ತೀಚಿನ ದಿನಗಳಲ್ಲಿ ಭಕ್ತರು ಮಹಿಳೆಯರು ಮಕ್ಕಳ ಸಹಿತ ರಥ ಬೀದಿಯಲ್ಲಿ ಹಾಗೂ ಧರ್ಮಸಮ್ಮೇಳನ ಮಂಟಪದಲ್ಲಿ ರಾತ್ರಿ ವೇಳೆಯಲ್ಲಿ ಮಲಗುತ್ತಿರುವುದು ಕಂಡು ಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾದಿಗಳಿಗೆ ಮಲಗಲು ವ್ಯವಸ್ಥೆ ಮಾಡುವ ವ್ಯವಸ್ಥೆಗಳಿದ್ದರೂ ಭಕ್ತರು ರಸ್ತೆಯಲ್ಲಿ ಮಲಗಬೇಕಾಗಿ ಬಂದದಕ್ಕೆ ಸಾರ್ವಜನಿಕರ ಆಕ್ರೋಶ ಒಂದು ಕಡೆಯಾದರೆ, ಇಲ್ಲಿ ವಸತಿ ವ್ಯವಸ್ಥೆಗಳು ಇವೆ. ಆದರೆ ಮಾಹಿತಿ ಕೊರತೆಯಿಂದ ಅದನ್ನು ಬಳಸಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯ ಇನ್ನೊಂದು ಕಡೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ವತಿಯಿಂದ ಭಕ್ತರಿಗಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಪ್ರಕಟಣೆ ಹೀಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ವಸತಿಗೃಹಗಳಲ್ಲಿ ಕೊಠಡಿಗಳನ್ನು ನೀಡಲಾಗುತ್ತಿದೆ. ಆದರೆ ವಸತಿಗೃಹಗಳಲ್ಲಿ ಕೊಠಡಿಗಳು ಭರ್ತಿಯಾದ ನಂತರದ ಸಂದರ್ಭಗಳಲ್ಲಿ ಶ್ರೀ ದೇವಳದ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ. ಆದರೂ ಕೂಡ ರಾತ್ರಿ ಸುಮಾರು ಗಂಟೆ 1ಗಂಟೆ ನಂತರ ಬಂದ ಕೆಲವು ಭಕ್ತಾದಿಗಳು ರಥಬೀದಿಗಳಲ್ಲಿ ತಂಗಿರುವುದು ಕಂಡುಬರುತ್ತದೆ. ಅಲ್ಲದೇ ನಿರಂತರ ಸರಕಾರಿ ರಜೆಗಳು ಇದ್ದುದರಿಂದ, ಅಕ್ಷಯ ತೃತೀಯ ಮತ್ತು ಕೆಲವು ವಿಶೇಷ ದಿನಗಳಲ್ಲಿ ಭಕ್ತಾದಿಗಳು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿರುತ್ತಾರೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಲ್ಲಿ ಈ ಮೂಲಕ ಮನವಿ ಮಾಡುವುದೇನೆಂದರೆ, ಶ್ರೀ ದೇವಳದ ವಸತಿಗೃಹಗಳಲ್ಲಿ ರಾತ್ರಿ ತಂಗಲು ಕೊಠಡಿಗಳು ಲಭ್ಯವಾಗದೇ ಇರುವ ಸಂದರ್ಭಗಳಲ್ಲಿ ಶ್ರೀ ದೇವಳದ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ತಂಗಲು ವಸತಿ ವ್ಯವಸ್ಥೆಗೊಳಿಸಲಾಗಿದ್ದು, ಭಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಮನವಿ ಮಾಡಲಾಗಿದೆ, ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಐಕಾನ್-
PublicNext
05/05/2022 05:19 pm