ಪುತ್ತೂರು: ಜಾತ್ರೆ-ಉತ್ಸವಾಧಿಗಳಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ವ್ಯಾಪಾರ ವ್ಯವಹಾರಕ್ಕೆ ಅವಕಾಶವಿರುತ್ತದೆ. ಆದರೆ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವೇ ಇಲ್ಲ. ಇಲ್ಲಿ ವ್ಯಾಪಾರ ಮಾಡುವುದಿದ್ದರೂ ಯಾವುದೇ ಗ್ರಾಹಕನಿಂದ ಹಣ ಸ್ವೀಕರಿಸುವಂತಿಲ್ಲ. ಈ ಕ್ಷೇತ್ರಕ್ಕೆ ಭಕ್ತಾಧಿಗಳನ್ನು ಕರೆತರುವ ಆಟೋ, ಕಾರು,ಟ್ಯಾಕ್ಸಿಗಳ ಚಾಲಕರು ಭಕ್ತಾಧಿಗಳಿಂದ ಬಾಡಿಗೆ ಪಡೆಯುವಂತಿಲ್ಲ. ಈ ಜಾತ್ರೆ ನೋಡಲು ಬರುವ ಎಲ್ಲಾ ಭಕ್ತಾಧಿಗಳು ಮಲ್ಲಿಗೊಂದನ್ನು ಬಿಟ್ಟು ಯಾವುದನ್ನೂ ಹಣ ಕೊಟ್ಟು ಖರೀದಿಸುವಂತಿಲ್ಲ.
ಪ್ರತಿ ಎಪ್ರಿಲ್ 28 ರಂದು ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಯುವುದು ಇಲ್ಲಿನ ವಾಡಿಕೆಯಾಗಿದ್ದು, ಇಲ್ಲಿನ ಜಾತ್ರೋತ್ಸವದ ಸಂದರ್ಭ ಕ್ಷೇತ್ರದ ಆಸುಪಾಸಿನಲ್ಲಿ ವ್ಯಾಪಾರ ಮಳಿಗೆಗಳನ್ನು ಹಾಕುವಂತಿಲ್ಲ.
ವ್ಯಾಪಾರ ಎನ್ನುವ ಅಕ್ಷರವೂ ಈ ಕ್ಷೇತ್ರದ ಸುತ್ತಮುತ್ತ ಜಾತ್ರೋತ್ಸವದ ಸಂದರ್ಭದಲ್ಲಿ ಕೇಳಿ ಬರುವಂತಿಲ್ಲ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಎಲ್ಲವನ್ನೂ ಉಚಿತವಾಗಿ ನೀಡಬೇಕಾದ ಕಟ್ಟು-ಕಟ್ಟಲೆ ಹಲವಾರು ವರ್ಷಗಳಿಂದ ಇಲ್ಲಿ ನಡೆದು ಕೊಂಡು ಬಂದಿದೆ.
ಪುತ್ತೂರು ನಗರದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಬಲ್ನಾಡು ಕ್ಷೇತ್ರಕ್ಕೆ ಪುತ್ತೂರು ಭಾಗದಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಭೇಟಿ ನೀಡುತ್ತಾರೆ. ಹೀಗೆ ಜಾತ್ರೋತ್ಸವದ ಸಂದರ್ಭದಲ್ಲಿ ಬಲ್ನಾಡಿಗೆ ಬರುವ ಆಟೋ, ಟ್ಯಾಕ್ಸಿ ಅಥವಾ ಇನ್ಯಾವುದೇ ಖಾಸಗಿ ವಾಹನಗಳೂ ಭಕ್ತಾಧಿಗಳಿಂದ ಬಾಡಿಗೆ ಸ್ವೀಕರಿಸುವಂತಿಲ್ಲ.
ಭಕ್ತರಿಗೆ ತಿಂಡಿ, ಊಟ, ಪಾನೀಯ ಎಲ್ಲವನ್ನೂ ಇಲ್ಲಿ ಉಚಿತವಾಗಿ ನೀಡಲಾಗುತ್ತದೆ. ಉಳ್ಳಾಲ್ತಿಗೆ ಅತೀ ಪ್ರೀತಿಪಾತ್ರವಾದ ಮಲ್ಲಿಗೆ ಹೂವನ್ನು ಬಿಟ್ಟು ಇಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತಿದ್ದು, ಇದು ಈ ಕ್ಷೇತ್ರದ ವಿಶೇಷವೂ ಆಗಿದೆ.
Kshetra Samachara
29/04/2022 01:13 pm