ಪುತ್ತೂರು : ದೇವಸ್ಥಾನಗಳ ಬ್ರಹ್ಮಕಲಶೋತ್ಸವಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಧಾರ್ಮಿಕತೆಯ ಜೊತೆಗೆ ವ್ಯಾಪಾರ-ವಹಿವಾಟಿಗೂ ದೇವಸ್ಥಾನಗಳ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ಕಲ್ಪಿಸುವುದು ಸಾಮಾನ್ಯವೂ ಆಗಿದೆ.
ಆದರೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮಾತ್ರ ಕೊಂಚ ವಿನೂತನ ಚಿಂತನೆಗೂ ಅವಕಾಶ ನೀಡಲಾಗಿದೆ. ಕುಮಾರಧಾರಾ ನದಿ ತೀರದಲ್ಲೇ ಇರುವ ಈ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದರೆ, ನದಿಯಲ್ಲಿ ಅಡ್ವೆಂಚರ್ ಬೋಟಿಂಗ್ ಗೂ ಅವಕಾಶವನ್ನು ಕಲ್ಪಿಸಲಾಗಿದೆ.
ಶಾಂತಿಮೊಗರು ಸುಬ್ರಹ್ಮಣ್ಯ ದೇವಸ್ಥಾನವನ್ನು ನವೀಕರಣಗೊಳಿಸಿದ ಬಳಿಕ ಇದೀಗ ಕ್ಷೇತ್ರದಲ್ಲಿ ಬ್ರಹ್ಮಕಲಶದ ಉತ್ಸವಗಳು ಆರಂಭಗೊಂಡಿದೆ. ಎಪ್ರಿಲ್ 5 ರಿಂದ ಎಪ್ರಿಲ್ 10 ರ ತನಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮವಿದ್ದು, ಈ ಸಂಭ್ರಮದ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಬೋಟಿಂಗ್ ಸಾಹಸ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವ ಅವಕಾಶವನ್ನೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನೀಡಲಾಗಿದೆ ಎಂದು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು ವಿವರಿಸಿದ್ದಾರೆ.
Kshetra Samachara
07/04/2022 05:02 pm