ಮಂಗಳೂರು: ಇತ್ತೀಚೆಗೆ ಎಲ್ಲೆಲ್ಲೂ ಸರಳ ಮದುವೆಗಳು ಕಣ್ಮರೆಯಾಗಿ ಅದ್ದೂರಿ ಮದುವೆಗಳೇ ಕಂಡು ಬರುತ್ತಿದೆ. ಆದರೆ ಮಂಗಳೂರಿನಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ 'ಮಂತ್ರ ಮಾಂಗಲ್ಯವನ್ನೇ ಆದರ್ಶವನ್ನಾಗಿರಿಸಿ ಸರಳ ಮದುವೆಯೊಂದು ನಡೆದಿದೆ.
ಲ್ಯಾಂಡ್ಸ್ ಲಿಂಕ್ ನಿವಾಸಿ ಛಾಯಾಗ್ರಹಕ ಹಾಗೂ ವೀಡಿಯೋ ಎಡಿಟರ್ ಆಗಿ ಗುರುತಿಸಿಕೊಂಡಿರುವ ವಿವೇಕ್ ಗೌಡ ಹಾಗೂ ಇವೆಂಟ್ ಮ್ಯಾನೇಜರ್ ಶಿವಾನಿ ಶೆಟ್ಟಿ ಜೋಡಿ ಮಂತ್ರ ಮಾಂಗಲ್ಯ ಮೂಲಕ ಸರಳ ಮದುವೆಯಾದ ಜೋಡಿ. ಇವರು ಯಾವುದೇ ವೇದ, ಮಂತ್ರಘೋಷವಿಲ್ಲದೆ, ಹೋಮ-ಹವನಾದಿ ಧೂಮವಿಲ್ಲದೆ, ವೈದಿಕ ಕಟ್ಟುಪಾಡುಗಳಿಲ್ಲದೆ ಸರಳವಾಗಿ ನಗರದ ಸುರತ್ಕಲ್ ನ ಹೋಮ್ ಸ್ಟೇಯಲ್ಲಿ ಮದುವೆಯಾಯಿತು.
ಬರೀ 100 ಮಂದಿ ಬಂಧು - ಮಿತ್ರರ ಸಮ್ಮಖದಲ್ಲಿ ಹಾರ ಬದಲಾವಣೆ, ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಚಿಂತಕ ವಿವೇಕಾನಂದ ಎಚ್.ಕೆ.ಯವರು ವಿವಾಹ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. ವಧು - ವರರು ತಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಸಹಬಾಳ್ವೆ ನಡೆಸುತ್ತೇವೆಂದು ಪ್ರತಿಜ್ಞೆಗೈದರು.
ಜೊತೆಗೆ ಎಲ್ಲರೂ ನಾಡಗೀತೆಯ ಅರ್ಥವನ್ನು ರೂಢಿಗೆ ತರುವ ಆಶಯದೊಂದಿಗೆ ನಾಡಗೀತೆಯನ್ನು ಹಾಡಿದರು. ಮದುವೆಯು ಯಾವುದೇ ಆಡಂಬರದ ಖರ್ಚಿಲ್ಲದೆ ಸರಳವಾಗಿ ನಡೆಯಿತು.
ಜೊತೆಗೆ ಎಲ್ಲರಿಗೂ ಸರಳ ಸಸ್ಯಹಾರಿ, ಮಾಂಸಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನಕ್ಕೂ ಮೊದಲು ಆಹಾರವನ್ನು ಪೋಲು ಮಾಡಬಾರದೆಂದುದ ಪ್ರತಿಜ್ಞೆ ಪಡೆದುಕೊಳ್ಳಲಾಯಿತು. ಒಟ್ಟಿನಲ್ಲಿ ಮಂಗಳೂರು ವಿಶಿಷ್ಟವಾದ, ಸರಳ ಮದುವೆಗೆ ಸಾಕ್ಷಿಯಾಯಿತು.
PublicNext
06/04/2022 08:11 am