ಮಂಗಳೂರು: ಸೌಹಾರ್ದತೆಯ ಬೀಡು ಇಲ್ಲಿ ಎಲ್ಲಾ ಧರ್ಮ, ಜಾತಿ ಮತದವರು ನೆಲೆಸಿದ್ದಾರೆ ಪರಸ್ಪರ ಪ್ರೀತಿ, ವಿಶ್ವಾಸ, ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಒಬ್ಬರ ಸಾಂಪ್ರದಾಯವನ್ನು ಮತ್ತೊಬ್ಬರು ಆಚರಿಸಿ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದನ್ನು ಕಂಡಿದ್ದೇವೆ. ಇಂತಹ ಹೆಮ್ಮೆಯ ಕನ್ನಡ ನಾಡಿನ ಕರಾವಳಿಯಲ್ಲಿ ಐತಿಹಾಸಿಕ ಪ್ರಸಿದ್ಧ ದೇಗುಲವೊಂದಿದೆ. ಅದುವೇ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ.
ಕೇರಳದ ಮುಸ್ಲಿಂ ವ್ಯಾಪಾರಿಯೊಬ್ಬ ಸುಮಾರು 800 ವರ್ಷಗಳ ಹಿಂದೆ ಕಟ್ಟಿದ ದೇಗುಲವಿದು. ಈ ಕ್ಷೇತ್ರದ ಐತಿಹ್ಯ ಮುಸ್ಲಿಂ ಸಾಮರಸ್ಯದ ದ್ಯೋತಕವಾಗಿದೆ. ಇಲ್ಲಿನ ದೇವಿ ದುರ್ಗಾಪರಮೇಶ್ವರಿ ಒಲಿದಿದ್ದೇ ಬಪ್ಪ ಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿಗೆ ಅನ್ನೋದು ಕ್ಷೇತ್ರದ ಕಥೆಗಳಿಂದ ಉಲ್ಲೇಖಗೊಂಡಿದೆ.
ವ್ಯಾಪಾರಕ್ಕೆ ಹೊರಡಲು ಶಾಂಭವಿ ನದಿಗೆ ತನ್ನ ಬೋಟ್ ಅನ್ನು ಇಳಿಸಿದಾಗ ಶಾಂಭವಿ ನದಿಯಲ್ಲಿ ಜಲದುರ್ಗೆಯಾಗಿ ಪಂಚ ಕಲ್ಲುಗಳ ರೂಪದಲ್ಲಿ ಆವಾಸವಾಗಿದ್ದ ಕಲ್ಲಿಗೆ ಬೋಟ್ ತಾಗಿ ರಕ್ತ ಸುರಿಯಲಾರಂಭಿಸಿತು. ಈ ಸಂದರ್ಭದಲ್ಲಿ ಭಯಭೀಯಗೊಂಡ ಬಪ್ಪ ಬ್ಯಾರಿ ವ್ಯಾಪಾರಿ ಮುಲ್ಕಿ ಸೀಮೆಯ ಅರಸರ ಬಳಿ ಘಟನೆ ಯ ಬಗ್ಗೆ ಹೇಳಿದಾಗ ಅರಸು ವೈದಿಕ ಪಂಡಿತರ ಬಳಿ ಪರಿಹಾರವನ್ನು ಕೇಳಿದ ಸಂದರ್ಭದಲ್ಲಿ ಶ್ರೀ ದೇವಿಯ ಅಶಯದಂತೆ ಬಪ್ಪ ಬ್ಯಾರಿ ದುರ್ಗಾಪರಮೇಶ್ವರಿಗೆ ಆಲಯವನ್ನು ಕಟ್ಟಿಸಿಕೊಡಬೇಕೆಂಬ ಆಶಯ ವ್ಯಕ್ತಪಡಿಸುತ್ತಾರೆ. ಮುಲ್ಕಿ ಸೀಮೆಯ ಅರಸರ ಮೂಲಕ ಬಪ್ಪ ಬ್ಯಾರಿ ದುರ್ಗಾಪರಮೇಶ್ವರಿ ದೇವಿಗೆ ದೇವಸ್ಥಾನವನ್ನು ಕಟ್ಟಿಸುತ್ತಾನೆ. ದೇವಿಯ ಆದೇಶದಂತೆ ಬಪ್ಪ ಬ್ಯಾರಿಯ ವಂಶಸ್ಥರು ರಥೋತ್ಸವ ಸಂದರ್ಭದಲ್ಲಿ ಹಾಜರಿದ್ದು ದೇವಿಯ ಗಂಧ ಪ್ರಸಾದ ಸ್ವೀಕಾರ ಮಾಡುವುದು ಕ್ಷೇತ್ರದ ವಾಡಿಕೆಯಾಗಿದೆ.
ವರ್ಷಂಪ್ರತಿ ನಡೆಯುವ ಜಾತ್ರ ಮಹೋತ್ಸವ ವೇಳೆ ಪೇಟೆ ಸವಾರಿ ನಡೆಯುತ್ತದೆ. ಈ ಸಂದರ್ಭದಲ್ಲಿ ಬಪ್ಪ ಬ್ಯಾರಿಯ ಮನೆಯ ಮುಂದೆ ಪ್ರಸಾದ ವಿತರಣೆ ನಡೆಯುತ್ತದೆ. ಬಪ್ಪ ಬ್ಯಾರಿಯ ವಂಶಸ್ಥರ ವ್ಯಕ್ತಿಯೊಬ್ಬರು ಅರ್ಚಕರಿಂದ ದೇವಿಯ ಪ್ರಸಾದವನ್ನು ಸ್ವೀಕರಿಸಿ ದುರ್ಗಾಪರಮೇಶ್ವರಿ ಅಮ್ಮನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ವಾಡಿಕೆ ಇಂದಿಗೂ ನಡೆದುಕೊಂಡು ಬಂದಿದೆ. ಇದರಿಂದಾಗಿ ಬಪ್ಪ ಬ್ಯಾರಿ ಕಟ್ಟಿಸಿದ್ದ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರ ಶಾಂತಿ, ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಧರ್ಮಗಳ ವಿಚಾರದಲ್ಲಿ ನಡೆಯುತ್ತಿರುವಂತಹ ಘಟನೆಗಳು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
PublicNext
25/03/2022 10:34 am