ಬಂಟ್ವಾಳ: ಜೈನ ಬಸದಿಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವುದು ಸಮಾಜದ ಸಬಲೀಕರಣ, ಪರಿವರ್ತನೆ ಪ್ರತೀಕ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಬಳಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ , ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಂಡು, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಧರ್ಮಸಿರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ವಿಶಿಷ್ಟ ಹಾಗೂ ಕಲಾತ್ಮಕವಾದ ಬಸದಿ ಪಂಜಿಕಲ್ಲುವಿನಲ್ಲಿ ನಿರ್ಮಾಣಗೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಬಹುದು ಎಂದರು. ಪರಮಪೂಜ್ಯ 108 ಅಮೋಘಕೀರ್ತಿ ಮುನಿ ಮಹಾರಾಜರು,108 ಅಮರಕೀರ್ತಿ ಮುನಿ ಮಹಾರಾಜರು ಹಾಗೂ 105 ನಿರ್ವಾಣ ಕ್ಷುಲಕ ಮಹಾರಾಜ್ ಅವರು ಪಾವನ ಸಾನಿಧ್ಯ ವಹಿಸಿದ್ದರು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರಕುಮಾರ್, ಜೈನ್ ಮಿಲನ್ ಬೆಂಗಳೂರು ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್, ಮಾನಸ್ತಂಭ ಕೊಡುಗೆ ನೀಡಿದ ಉದ್ಯಮಿ ರವೀಂದ್ರ ಪಾಟೀಲ್ ನಾಸಿಕ್ ದಂಪತಿ, ಬಸದಿಯ ಪುರೋಹಿತ ರತ್ನವರ್ಮ ಇಂದ್ರ ಉಪಸ್ಥಿತರಿದ್ದರು. ಈ ಸಂದರ್ಭ ಶಿಲ್ಪಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಬಸದಿ ಜೀರ್ಣೋದ್ಧಾರ ಹಾಗೂ ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಸದಸ್ಯೆ, ಪತ್ರಕರ್ತೆ ನವಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
05/02/2022 01:11 pm