ಉಡುಪಿ: ಪರ್ಯಾಯ ಸಡಗರದಲ್ಲಿ ಶ್ರೀ ಕೃಷ್ಣಮಠ, ರಥಬೀದಿ ಮತ್ತು ನಗರ ಮಿಂದೇಳುತ್ತಿದ್ದು, ಸಾವಿರಾರು ಭಕ್ತಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕೃಷ್ಣಾಪುರ ಶ್ರೀಗಳಿಗೆ ಶ್ರೀಕೃಷ್ಣ ಪೂಜಾಧಿಕಾರ ಸಿಗಲು ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಇವೆ. ಇತ್ತ ಮಠದತ್ತ ಭಕ್ತಸಾಗರವೇ ಹರಿದುಬರುತ್ತಿದೆ. ಸೀಮಿತ ಚೌಕಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪರ್ಯಾಯಕ್ಕೆ ಕಳೆ ತಂದಿವೆ. ಮಠದ ಪರಿಸರ, ರಥಬೀದಿ, ನಗರ ಬಣ್ಣಬಣ್ಣದ ವಿದ್ಯುದ್ದೀಪಗಳು,ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ.
ಮಂಗಳವಾರ ಮುಂಜಾನೆ 2.15ಕ್ಕೆ ಭಾವಿ ಪರ್ಯಾಯ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ದಂಡತೀರ್ಥಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿ, 2.30ಕ್ಕೆ ಉಡುಪಿ ಜೋಡುಕಟ್ಟೆಗೆ ಆಗಮಿಸುತ್ತಾರೆ. ಅಲ್ಲಿ ಉಳಿದ ಮಠಾಧೀಶರುಗಳು ಅವರನ್ನು ಸ್ವಾಗತಿಸುತ್ತಾರೆ. ನಂತರ ಶ್ರೀಕೃಷ್ಣಮಠಕ್ಕೆ ಮೆರವಣಿಗೆ ಆರಂಭವಾಗುತ್ತದೆ.
ಬೆಳಗ್ಗೆ 5.25ಕ್ಕೆ ಶ್ರೀಕೃಷ್ಣಮಠ ಪ್ರವೇಶ ಮಾಡಿ ದೇವರ ದರ್ಶನ ಪಡೆಯಲಿರುವ ಶ್ರೀಗಳಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಬೆಳಗ್ಗೆ 5.45ಕ್ಕೆ ಬೆಳ್ಳಿಯ ಸಟ್ಟುಗ ಹಸ್ತಾಂತರಿಸಿ, ಬೆಳಗ್ಗೆ 5.55ಕ್ಕೆ ಸರ್ವಜ್ಞ ಪೀಠಾರೋಹಣ ನಡೆಯಲಿದೆ. ಬಳಿಕ ರಾಜಾಂಗಣದಲ್ಲಿ ಅಷ್ಟ ಮಠಾಧೀಶರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ನಡೆಯಲಿದೆ.
PublicNext
17/01/2022 11:04 pm