ವರದಿ: ರಹೀಂ ಉಜಿರೆ
ಉಡುಪಿ : ಕೃಷ್ಣನೂರಿನ ದೊಡ್ಡ ಹಬ್ಬ ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ.ಇದೇ ತಿಂಗಳು ನಡೆಯುವ ಪರ್ಯಾಯಕ್ಕೆ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ಉಡುಪಿ ರಸ್ತೆಗಳಲ್ಲಿ ಸ್ವಾಗತ ಗೋಪುರಗಳು ಕಣ್ಮನ ಸೆಳೆದರೆ, ಅತ್ತ ಕೃಷ್ಣ ಮಠವನ್ನು ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗುತ್ತಿದೆ.
ಆದರೆ ಕೋವಿಡ್ ಕರಿಛಾಯೆ ಪರ್ಯಾಯ ಮಹೋತ್ಸವಕ್ಕೆ ದೊಡ್ಡ ಆತಂಕ ತಂದೊಡ್ಡಿದೆ. ಮಾರ್ಗಸೂಚಿ ಅನುಸರಿಸಿ, ಪರ್ಯಾಯ ನಡೆಸುವುದೇ ಸವಾಲಾಗಿದೆ. ಶ್ರೀಕೃಷ್ಣಮಠದಲ್ಲಿ ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯದಂತೆ ಅಷ್ಠಮಠದ ಯತಿಗಳು ಎರಡು ವರ್ಷಗಳಿಗೊಮ್ಮೆ ಪೂಜಿಸುವ ಕ್ರಮವನ್ನು ಆರಂಭಿಸಿದರು. ಹೀಗಾಗಿ ಪರ್ಯಾಯ ಮಹೋತ್ಸವಕ್ಕೆ ಮಠ ಪರಂಪರೆಯಲ್ಲಿ ವಿಶೇಷ ಮಹತ್ವ.ಸದ್ಯ ಅದಮಾರು ಈಶ ಪ್ರಿಯ ಶೀಗಳ ಪರ್ಯಾಯ ಕೊನೆಗೊಂಡು, ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಿರುವ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರ ಪರ್ಯಾಯಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಜ. 17ರ ರಾತ್ರಿಯಿಂದ ಜ. 18ರ ಬೆಳಗ್ಗಿ ತನಕ ಪರ್ಯಾಯೋತ್ಸವ ಜರಗಲಿದ್ದು ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.
ಪರ್ಯಾಯ ಅಂದರೆ ಸಾವಿರಾರು ಮಂದಿ ಭಕ್ತರು ದೂರದೂರುಗಳಿಂದ ಆಗಮಿಸುತ್ತಾರೆ. ಆದರೆ ಸದ್ಯ ಕೋವಿಡ್ ರೂಲ್ಸ್ ಜಾರಿಯಲ್ಲಿದೆ. ಹೆಚ್ಚು ಜನ ಸೇರಿಸುವಂತಿಲ್ಲ. ಹೀಗಾಗಿ ಮಾರ್ಗಸೂಚಿ ಪಾಲಿಸಿಕೊಂಡು ಪರ್ಯಾಯ ಮಹೋತ್ಸವ ನಡೆಸುವುದೇ ದೊಡ್ಡ ಸವಾಲಾಗಿದೆ.
ಒಟ್ಟಿನಲ್ಲಿ, ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಅದ್ದೂರಿ ಬದಲು ಸರಳವಾಗಿ ಪರ್ಯಾಯ ನಡೆಸಲು ಚಿಂತನೆ ನಡೆಯುತ್ತಿದೆ. ಯಾವುದಕ್ಕೂ ಭಕ್ತರ ಸಹಕಾರ ಅಗತ್ಯವಾಗಿದೆ.
Kshetra Samachara
05/01/2022 06:25 pm