ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಹಿಂದಿನಿಂದಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದರು.
ಈಗ ವಿರೋಧ ಎದುರಾಗಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಕಾರಣ ಅವರನ್ನು ತರಗತಿಯಿಂದ ಹೊರ ಹಾಕಲಾಗುತ್ತಿದೆ. ಇದು ಧಾರ್ಮಿಕ ತಾರತಮ್ಯವಾಗಿದ್ದು ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಮುಖಂಡರು ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಎಲ್ಲ ವ್ಯಕ್ತಿಗಳು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ, ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ. ಇಲ್ಲಿ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಆದರೆ, ಇದೀಗ ಶಿಕ್ಷಕ ವೃಂದದ ಕೆಲವೊಬ್ಬರು ಹಿಜಾಬ್ ಧರಿಸಲು ತಡೆಯುತ್ತಿದ್ದಾರೆ ಹಾಗೂ ತರಗತಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ. ಈ ಕುರಿತು ಅಪರ ಜಿಲ್ಲಾಧಿಕಾರಿ ಮತ್ತು ಡಿಡಿಪಿಯು ಅವರಿಗೆ ಮನವಿ ಮಾಡಿದ್ದು, ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿದ್ದರು. ಆದರೆ, ನಿನ್ನೆ ಪುನಃ ಆ ವಿದ್ಯಾರ್ಥಿನಿಯರನ್ನು ಇದೇ ಕಾರಣಕ್ಕೆ ತರಗತಿಯಿಂದ ಹೊರ ಹಾಕಿದ್ದಾರೆ.
ಅಲ್ಲಿಯ ಪ್ರಾಂಶುಪಾಲರನ್ನು ವಜಾಗೊಳಿಸಬೇಕು. ಅದಲ್ಲದೆ, ಪ್ರಾಧ್ಯಾಪಕರು ಹಾಜರಾತಿ ನೀಡದ ಕಾರಣ ಅವರ ಮೇಲೂ ಕಠಿಣ ಕ್ರಮ ಜರುಗಿಸಬೇಕು. ಅಲ್ಲಿ ನಡೆಯುತ್ತಿರುವ ಧಾರ್ಮಿಕ ತಾರತಮ್ಯವನ್ನು ನಿಲ್ಲಿಸಿ, ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಬೇಕು. ಇಲ್ಲದಿದ್ದರೆ ತೀವ್ರ ರೀತಿಯ ಹೋರಾಟ ಎದುರಿಸಬೇಕಾಗಬಹುದು ಎಂದು ಮುಖಂಡರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ, ಮಸೂದ್ ಮನ್ನ , ಅಸೀಲ್ ಅಕ್ರಮ್ ಜಿಲ್ಲಾಧ್ಯಕ್ಷ, ಝಮ್ ಝಮ್ ಜಿಲ್ಲಾ ಉಪಾಧ್ಯಕ್ಷೆ ಮತ್ತು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
PublicNext
01/01/2022 09:39 pm