ಪುತ್ತೂರು: ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ದೇವಸ್ಥಾನದ ಬ್ರಹ್ಮಕಲಶಕ್ಕೆ ಬೇಕಾಗುವಷ್ಟು ನಿಧಿ ಸಂಗ್ರಹಿಸಿ ದ.ಕ. ಜಿಲ್ಲೆಯ ಬ್ರಹ್ಮಕಲಶ ಸಮಿತಿಯೊಂದು ಜನಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರು ತಾಲೂಕಿನ ಸರ್ವೆಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ನಾದುರಸ್ಥಿಯಲ್ಲಿದ್ದು, ಜೀರ್ಣೋದ್ಧಾರ ಮಾಡಬೇಕೆಂದು ಊರಿನವರು 2 ವರ್ಷಗಳ ಹಿಂದೆ ನಿರ್ಧರಿಸಿದ್ದರು.
ಆದರೆ, ಆ ಸಂದರ್ಭ ಕೊರೊನಾ ಲಾಕ್ ಡೌನ್ ನಿಂದಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಾದ ಹಣ ಹೊಂದಿಸುವುದು ಹೇಗೆಂಬ ಸವಾಲು ಮುಂದಿತ್ತು. ಅದಕ್ಕಾಗಿ ಡಿಜಿಟಲ್ ವ್ಯವಸ್ಥೆಗೆ ದೇವಸ್ಥಾನ ಸಮಿತಿ ನಿರ್ಧರಿಸಿತು. ಸಾಮಾಜಿಕ ಜಾಲತಾಣದ ಮೂಲಕ ದೇವಸ್ಥಾನದ ಭಕ್ತರು, ದಾನಿಗಳನ್ನು ಸಂಪರ್ಕಿಸಲು ನಿರ್ಧರಿಸಿದ ಸಮಿತಿಯವರು, ವಾಟ್ಸ್ ಆಪ್, ಫೇಸ್ ಬುಕ್ ಮೂಲಕ ಈ ಕೈಂಕರ್ಯಕ್ಕೆ ಮುಂದಾದರು.
ಇದಕ್ಕಾಗಿ ದೇವಸ್ಥಾನದ ಹೆಸರಿನಲ್ಲಿ ವಾಟ್ಸ್ ಆಪ್ ಗ್ರೂಪ್ಸ್ ರಚಿಸಿ 4 ಸಾವಿರಕ್ಕೂ ಅಧಿಕ ಭಕ್ತರನ್ನು ಸಂಪರ್ಕಿಸಿತು. ಇದರಿಂದ ಬ್ರಹ್ಮಕಲಶಕ್ಕೆ ಬೇಕಾದ ಅರ್ಧದಷ್ಟು ಹಣ ಸಂಗ್ರಹಿಸುವಲ್ಲಿ ಸಫಲತೆ ಕಂಡಿದೆ. ದೇವಸ್ಥಾನದ ಬಗ್ಗೆ ಏನೂ ತಿಳಿಯದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರ ಮುಖ ಪರಿಚಯವೂ ಇಲ್ಲದ ಅಪರಿಚಿತ ದಾನಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ನೀಡಿದ್ದಾರೆ!
ಸುಮಾರು 1.50 ಕೋಟಿಯಷ್ಟು ಹಣವನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಗ್ರಹಿಸಿ, ಈ ಸಾಮಾನ್ಯ ಗ್ರಾಮದ ಜನರು ಅಸಾಮಾನ್ಯ ಸಾಧನೆಯನ್ನೇ ಮಾಡಿ ಗಮನ ಸೆಳೆದಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯ ಈ ಸಾಧನೆಗೆ ಭಾರಿ ಪ್ರಶಂಸೆಯೂ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು.
Kshetra Samachara
20/12/2021 04:00 pm