ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುತ್ಪಾಡಿ ಗ್ರಾಮದಲ್ಲಿ ಗ್ರಾಮಸ್ಥನಿಗೆ ಯಜಮಾನ ಪಟ್ಟ!

ವರದಿ: ರಹೀಂ ಉಜಿರೆ

ಪಬ್ಲಿಕ್ ನೆಕ್ಸ್ಟ್ ವಿಶೇಷ

ಕುತ್ಪಾಡಿ: ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಇಂದಿಗೂ ರಾಜಾಳ್ವಿಕೆಯ ಕುರುಹುಗಳು ಅಲ್ಲಲ್ಲಿ ಕಾಣಿಸಿಗುತ್ತವೆ. ದೈವಸ್ಥಾನದ ಆಳ್ವಿಕೆಯನ್ನು ಮುಂದುವರಿಸಲು ಯಜಮಾನನಿಗೆ ಪಟ್ಟ ಕಟ್ಟುವ ಅಪರೂಪದ ಆಚರಣೆ ಉಡುಪಿಯಲ್ಲಿ ನಡೆಯಿತು.

ಉಡುಪಿಯ ಕುತ್ಪಾಡಿ ಎಂಬಲ್ಲಿರುವ ಬ್ರಹ್ಮಬೈದರ್ಕಳ ಗರಡಿಯ ದೃಶ್ಯ ಇದು. ಈ ಗರಡಿಗೆ ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿದೆ. ಈ ಗರಡಿಯ ಮುಂದಾಳುತ್ವವನ್ನು ವಹಿಸಿಕೊಳ್ಳುವ ವ್ಯಕ್ತಿಗೆ ಇಲ್ಲಿ ಪಟ್ಟ ಕಟ್ಟಲಾಗುತ್ತದೆ. ಈ ಹಿಂದೆ ಯಜಮಾನರಾಗಿದ್ದ ಕುಟ್ಟಿ ಶೆಟ್ಟಿ ಎಂಬವರಿಂದ ಈ ಅಧಿಕಾರ ಈಗ ಚಂದ್ರ ಶೆಟ್ಟಿ ಎಂಬವರಿಗೆ ಹಸ್ತಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ಕುತ್ಪಾಡಿ ಗರಡಿಯಲ್ಲಿ ಪಟ್ಟ ಕಟ್ಟುವ ವಿಶೇಷ ಆಚರಣೆ ನಡೆಯಿತು. ಕರಾವಳಿಯ ದೈವಾರಾಧನೆಗೆ ಹಿಂದಿನ ಕಾಲದಲ್ಲಿ ರಾಜ ಆಳ್ವಿಕೆಯ ಬೆಂಬಲವಿತ್ತು. ಅನೇಕ ಮನೆತನಗಳು ತಮ್ಮ ಊರಿನ ದೈವಸ್ಥಾನಗಳನ್ನು ಪೋಷಿಸುತ್ತಾ ಬಂದಿದ್ದವು. ಈ ಮನೆತನಗಳ ಯಜಮಾನಿಕೆಯಲ್ಲಿ ವರ್ಷದ ಪೂಜೆ ಪುರಸ್ಕಾರ, ವಾರ್ಷಿಕ ನೇಮೋತ್ಸವಗಳು ನಡೆಯುತ್ತಾ ಬಂದಿವೆ.ಈಗ ಆ ಮನೆತನಗಳ ಕೈಯಿಂದ ಭೂಮಿ ಮತ್ತು ಗ್ರಾಮದ ಆಳ್ವಿಕೆಗಳು ಕೈತಪ್ಪಿ ಹೋಗಿದ್ದರೂ ಧಾರ್ಮಿಕ ಕ್ಷೇತ್ರಗಳು ಮಾತ್ರ ಇಂದಿಗೂ ಉಳಿದುಕೊಂಡಿವೆ.

ಯಜಮಾನನಾಗಿ ಅಧಿಕಾರ ಸ್ವೀಕರಿಸಿದವರು ಈ ಗರಡಿಯ ಖರ್ಚುವೆಚ್ಚಗಳನ್ನು ತಾವೇ ಸರಿದೂಗಿಸಬೇಕು. ಗರಡಿಯ ಮುಖ್ಯಸ್ಥರಾದ ಅವರ ಮಾತಿಗೆ ಗ್ರಾಮದಲ್ಲಿ ವಿಶೇಷ ಮಾನ್ಯತೆ ಇರುತ್ತದೆ. ಹಿಂದೆ ಊರಿನ ಸಣ್ಣಪುಟ್ಟ ನ್ಯಾಯ ತೀರ್ಮಾನಗಳನ್ನು ಇವರೇ ಮುಂದೆ ನಿಂತು ಮಾಡುತ್ತಿದ್ದರು. ಇದಲ್ಲದೆ ಇವರು ಸ್ವೇಚ್ಛಾಚಾರದಿಂದ ಬದುಕುವಂತಿಲ್ಲ.ಒಂದಷ್ಟು ಕಠಿಣ ವಿಧಿ-ನಿಷೇಧಗಳನ್ನು ಪಾಲಿಸಬೇಕಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರು ಗರೋಡಿಯ ದೈವಗಳ ಪ್ರತಿನಿಧಿಯಂತೆ ಕೆಲಸ ಮಾಡುತ್ತಾರೆ. ಹಾಗಾಗಿ ಈ ಪಟ್ಟ ಸ್ವೀಕರಿಸುವ ಆಚರಣೆಗೆ ವಿಶೇಷ ಮಹತ್ವ ಇದೆ

ಗರೋಡಿಗಳು ಒಂದು ಕಾಲದಲ್ಲಿ ಯುದ್ಧ ತರಬೇತಿಯ ಕೇಂದ್ರಗಳಾಗಿದ್ದವು.ಬ್ರಿಟಿಷ್ ಆಳ್ವಿಕೆ ಬಂದ ನಂತರ ಇದು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿವೆ. ಬದಲಾದ ಕಾಲಘಟ್ಟದಲ್ಲೂ ಕೂಡ ಹಳೆಯ ನಂಬಿಕೆ ಮತ್ತು ಪರಂಪರೆಯನ್ನು ಈಗಲೂ ಕುತ್ಪಾಡಿ ಗರಡಿ ಉಳಿಸಿಕೊಂಡು ಬಂದಿರುವುದು ವಿಶೇಷ.

Edited By : Manjunath H D
Kshetra Samachara

Kshetra Samachara

24/11/2021 05:40 pm

Cinque Terre

11.41 K

Cinque Terre

1

ಸಂಬಂಧಿತ ಸುದ್ದಿ