ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರಿಂಜ: ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಗುಡುಗಿದ ಹಿಂಜಾವೇಯ ಜಗದೀಶ ಕಾರಂತ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಭಾನುವಾರ ರುದ್ರಗಿರಿಯ ರಣಕಹಳೆ ಎಂಬ ಜನಜಾಗೃತಿ ಸಮಾವೇಶ ನಡೆದಿದ್ದು, ಈ ಸಂದರ್ಭ ವಿವಿಧ ಬೇಡಿಕೆ ಈಡೇರಿಕೆಗೆ ಡಿ.21ರ ಗಡುವನ್ನು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ನೀಡಿದ್ದಾರೆ.

ಕಾರಿಂಜ ದೇವಸ್ಥಾನದ ರಥಬೀದಿಯಲ್ಲಿ ನಡೆದ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ದೇವಸ್ಥಾನದ ಪರಿಸರವನ್ನು ಧಾರ್ಮಿಕ ವಲಯವನ್ನಾಗಿ ಘೋಷಿಸಬೇಕು. ಭಕ್ತರ ಅನುಕೂಲತೆಗಾಗಿ ಮುಂದಿನ ಶಿವರಾತ್ರಿಗೆ ಶಿವಮಾಲೆ ಧಾರಣೆ ನಡೆಸಿ ಎಲ್ಲೆಡೆಯಿಂದ ಭಕ್ತರಿಗೆ ಬರಲು ಅನುವು ಮಾಡಿಕೊಡಬೇಕು. ದೇವಸ್ಥಾನಕ್ಕೆ ಅನ್ಯಧರ್ಮೀಯರ ಪ್ರವೇಶ ನಿಷೇಧಿಸಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯತೆ ಕೆಡಿಸಬಾರದು. ದೇವಸ್ಥಾನದ ಪರಿಸರದಲ್ಲಿ ನಡೆಯುವ ಗಣಿಗಾರಿಕೆಯನ್ನು ಜಿಲ್ಲಾಡಳಿತ ತತ್‌ಕ್ಷಣ ನಿಲ್ಲಿಸಬೇಕು. ಗೋಮಾಳ ಪ್ರದೇಶವನ್ನು ದೇವಸ್ಥಾನದ ಸುಪರ್ದಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಬಂಟ್ವಾಳ ಘಟಕದ ಕಾರ್ಯದರ್ಶಿ ಪದ್ಮನಾಭ ಮಯ್ಯ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಗ್ಗ ಜಂಕ್ಷನ್‌ನಿಂದ ದೇವಸ್ಥಾನದವರೆಗೆ ಕಾಲ್ನಡಿಗೆಯ ಶೋಭಾಯಾತ್ರೆ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರ ವಾಹನ ಜಾಥಾ ವಗ್ಗ ಜಂಕ್ಷನ್‌ನಲ್ಲಿ ಸಮಾವೇಶಗೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕಾರಿಂಜ ದೇವಸ್ಥಾನದ ಗ್ರಾಮಾಣಿ ವೆಂಕಟರಮಣ ಮುಚ್ಚಿನ್ನಾಯ ಹಾಗೂ ಪ್ರಮುಖರು ತೆಂಗಿನಕಾಯಿ ಒಡೆದು ಪಾದಯಾತ್ರೆಗೆ ಚಾಲನೆ ನೀಡಿದರು. ಹಿಂಜಾವೇ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಮತ್ತು ಸದಸ್ಯರು, ಕಾವಳಮೂಡೂರು ಗ್ರಾ.ಪಂ.ಉಪಾಧ್ಯಕ್ಷ ಅಜಿತ್ ಶೆಟ್ಟಿ, ಜಿಲ್ಲಾ, ತಾಲೂಕು ಘಟಕಗಳ ಪ್ರಮುಖರು, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

22/11/2021 07:47 am

Cinque Terre

6.35 K

Cinque Terre

0