ಸುಳ್ಯ: ಚರ್ಮ ಸಂಬಂಧಿತ ಯಾವುದೇ ಸಮಸ್ಯೆಯಿದ್ದಲ್ಲಿ, ವೈದ್ಯರನ್ನು ಭೇಟಿಯಾಗುವ ಮೊದಲು ದ.ಕ. ಜಿಲ್ಲೆಯ ಸುಳ್ಯದ ಕ್ಷೇತ್ರವೊಂದಕ್ಕೆ ಭೇಟಿ ನೀಡೋದು ಉತ್ತಮ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದು.
ಯಾಕೆಂದರೆ ಈ ಕ್ಷೇತ್ರದ ಪಕ್ಕದಲ್ಲೇ ಹರಿಯುವ ಹಳ್ಳದಲ್ಲಿರುವ ಮೀನುಗಳೇ ಎಲ್ಲ ಚರ್ಮರೋಗ ನಿವಾರಿಸುವ ಸ್ಕಿನ್ ಡಾಕ್ಟರ್ಸ್!
ಇಲ್ಲಿನ ತೋಡಿಕಾನದ ಪುರಾತನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಪಕ್ಕದ ಹಳ್ಳದಲ್ಲಿ ಸಾವಿರಾರು ಮೀನುಗಳಿದ್ದು, ಅಕ್ಕಿ- ಹೊದಲು ಹಾಕಿ, ಪ್ರಾರ್ಥಿಸಿದರೆ ಸಕಲ ಚರ್ಮರೋಗ ಗುಣವಾಗುತ್ತವೆ ಎಂಬ ಅಚಲ ನಂಬಿಕೆಯಿದೆ.
ಪೌರಾಣಿಕೆ ಹಿನ್ನೆಲೆ: ಕಣ್ವ ಮಹರ್ಷಿಗಳು ತೋಡಿಕಾನದ ಕಾನನ ನಡುವೆ ತಪಸ್ಸನ್ನಾಚರಿಸುತ್ತಿದ್ದ ಕಾಲದಲ್ಲಿ ಕ್ಷೇತ್ರದ ಪಕ್ಕದಲ್ಲೇ ಇರುವ ದೇವರಗುಂಡಿ ಜಲಪಾತದಿಂದ ಶಿವಲಿಂಗವನ್ನು ತೋಡಿಕಾನ ಕ್ಷೇತ್ರಕ್ಕೆ ತರಲು ನಿರ್ಧರಿಸುತ್ತಾರೆ. ಈ ಸಂದರ್ಭ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದಾಗ ದೇವರು ಪ್ರತ್ಯಕ್ಷರಾಗುತ್ತಾರೆ. ಜೊತೆಗೆ ವಿಷ್ಣುವೂ ಮತ್ಸ್ಯರೂಪದಲ್ಲಿ ಬಂದು ಮಹರ್ಷಿ ಇಚ್ಛೆಯಂತೆ ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ತೋಡಿಕಾನ ಕ್ಷೇತ್ರ ತಲುಪುತ್ತಾರೆ. ಶಿವ ಮತ್ಸ್ಯವಾಹನನಾಗಿ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುತ್ತಾರೆ.
ಈ ಸಂದರ್ಭ ಕಣ್ವ ಮಹರ್ಷಿಗಳು ಮಹಾವಿಷ್ಣುವನ್ನೂ ಪ್ರಾರ್ಥಿಸಿ, ಶಿವನ ಜೊತೆಗೆ ವಿಷ್ಣುವೂ ಕ್ಷೇತ್ರದಲ್ಲಿ ಸಾನಿಧ್ಯ ಪಡೆಯಬೇಕೆಂದು ಇಚ್ಛಿಸುತ್ತಾರೆ. ಈ ಕಾರಣಕ್ಕಾಗಿ ವಿಷ್ಣುವೂ ಮತ್ಸ್ಯರೂಪದಲ್ಲಿ ಇಂದಿಗೂ ಈ ದೇವರಗುಂಡಿ ತೊರೆಯಲ್ಲಿ ನೆಲೆಸಿದ್ದಾರೆ. ಈ ಕಾರಣಕ್ಕಾಗಿಯೇ ತೊರೆಯಲ್ಲಿ ಅಪರಿಮಿತ ಸಂಖ್ಯೆಯಲ್ಲಿ ಮೀನುಗಳಿವೆ. ದೇಹಕ್ಕೆ ಕಾಡುವ ಚರ್ಮರೋಗಾದಿ ನಿವಾರಣೆಗೆ ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಸಮಸ್ಯೆ ಬಗೆಹರಿಯುತ್ತವೆ ಎಂಬುದು ಜನಮಾನಸದಲ್ಲಿ ಬೇರೂರಿದೆ.
Kshetra Samachara
06/11/2021 08:13 pm