ಪುತ್ತೂರು: ತುಳುನಾಡಿನ ವಿವಿಧ ಸಂಪ್ರದಾಯಿಕ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿದ್ದು, ಇಂಥಹ ಆಚರಣೆಗಳಲ್ಲಿ ಗದ್ದೆಕೋರಿ, ಪೂಕರೆ ಸಂಪ್ರದಾಯವೂ ಸೇರಿಕೊಂಡಿದೆ. ಇದಕ್ಕೆ ತುಳುನಾಡಿಲ್ಲಿ ಭೂಮಿ ಪೂಜೆ ಎಂದೂ ಕರೆಯುತ್ತಾರೆ.
ಪರಶುರಾಮಸೃಷ್ಟಿಯ ತುಳುನಾಡಿನಲ್ಲಿ ಬಳ್ಳಾಲ ಅರಸರ ಆಡಳಿತಕ್ಕೊಳಪಟ್ಟ ರಾಜಮನೆತನಗಳಿದ್ದು , ಗ್ರಾಮೀಣ ಪ್ರದೇಶದಲ್ಲಿ ಅರಸು ಮನೆತನಗಳಿಗೆ ಸಂಬಂಧಪಟ್ಟ ಉಪಮನೆತನಗಳಿದ್ದು ಅವುಗಳಲ್ಲಿ ಬೀಡು, ರಾಜ್ಯ ,ಗುತ್ತು, ಬಾರಿಕೆ, ತಲೆ ಮನೆ ಎಂಬ ಮನೆತನಗಳು ಅಂದಿನ ಕಾಲದ ರಾಜಕೀಯ ಪದ್ದತಿಯ ವ್ಯವಸ್ಥೆಗಳಾಗಿದ್ದವು .ಅಂದಿನ ಕಾಲದಲ್ಲಿ ಈ ಮನೆತನಗಳಿಗೆ ಸೇರಿದ ಕಂಬಳಗದ್ದೆಗಳಿದ್ದು, ಇಂತಹ ಕಂಬಳ ಗದ್ದೆಗಳಿಗೂ, ಆ ಗ್ರಾಮದ ದೈವಗಳ ಆರಾಧನೆಗೂ ನಿಕಟ ಸಂಬಂಧವಿತ್ತು.
ಕಂಬಳ ಗದ್ದೆಕೋರಿಯು ಭೂಮಿಯನ್ನು ಪೂಜಿಸಿ ಆರಾಧಿಸುವಂತಹ ತುಳುವರ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡ ಬಂದಿರುವ ಪದ್ದತಿಯಾಗಿದೆ. ಇದನ್ನು ಆರಾಧಿಸುವಲ್ಲಿ ಪ್ರಾದೇಶಿಕನುಸಾರವಾಗಿ ಹಲವು ಕಟ್ಟುಪಾಡುಗಳಿವೆ.
ಆ ಕ್ರಮಗಳು ಮುಕ್ತಾಯಗೊಂಡ ಬಳಿಕ ಕಂಬಳ ಗದ್ದೆಗೆ ಇಳಿಯುವ ಕೋಣಗಳು ಮತ್ತು ಎತ್ತುಗಳನ್ನು ವಾದ್ಯಗೋಷ್ಟಿಯೊಂದಿಗೆ ಬಹಳ ಸಂಭ್ರಮದಿಂದ ಇಳಿಸುತ್ತಾರೆ.
ಗದ್ದೆಯನ್ನು ಉತ್ತು ನಂತರ ಅಡಿಕೆ ಮರದಿಂದ ತಯಾರಿಸಿದ ಪೂಕರೆಯನ್ನು ಹೂವಿನಿಂದ ಅಲಂಕರಿಸಿ ಗುತ್ತು ಗ್ರಾಮದವರು ಪ್ರಾರ್ಥನೆಯನ್ನು ಮಾಡಿ ಕಂಬಳಗದ್ದೆಗೆ ಪೂಕರೆಯನ್ನೂ ಬಲ್ಲಿ ಗದ್ದೆಗೆ (ಬಾಳೆ ಹಾಕುವ ಗದ್ದೆ) ಒಂದು ಬಾಳೆ ಗಿಡವನ್ನೂ ಹಾಕುತ್ತಾರೆ.ಅದೇ ದಿನ ರಾತ್ರಿ ಗ್ರಾಮದೈವಗಳಿಗೆ ನೇಮೋತ್ಸವ ನಡೆಯುತ್ತದೆ.
ಈ ಗದ್ದೆ ಕೋರಿಯನ್ನು ತುಳುವಿನಲ್ಲಿ ಭೂಮಿದ ಮದಿಮೆ ,ಕಂಬುಳದ ವಿಳಯ ಚಾವಡಿದ ಮೆಚ್ಚಿಗೆ ಕಂಬಳದ ಗದ್ದೆ ಕೋರಿ ಎಂಬ ಹೆಸರಿನಿಂದ ನಾಡಿನ ಹಬ್ಬದಂತೆ ವಿಜೃಂಭಣೆಯಿಂದ ಆಚರಿಸುವಂತಹ ಪದ್ದತಿ ತುಳುನಾಡಿನಾದ್ಯಂತ ನಡೆಯುತ್ತಿದೆ.
Kshetra Samachara
21/10/2021 09:52 pm