ಮುಲ್ಕಿ: ಮುಲ್ಕಿ ಪರಿಸರದಲ್ಲಿ ಮಹಾಲಯ ಅಮಾವಾಸ್ಯೆ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮುಲ್ಕಿ ಸಮೀಪದ ಹೆಜಮಾಡಿ ಸಮುದ್ರತೀರದಲ್ಲಿ ವಿವಿಧ ಕಡೆಗಳಿಂದ ಬಂದ ಭಕ್ತರು ಮಹಾಲಯ ಅಮಾವಾಸ್ಯೆ ಪ್ರಯುಕ್ತ ಅಗಲಿದ ಕುಟುಂಬದ ಹಿರಿಯರ ಸದ್ಗತಿಗಾಗಿ ಪ್ರಾರ್ಥಿಸಿ ಸಮುದ್ರಸ್ನಾನ ಪೂರ್ವಕ ತಿಲ ಹೋಮ ಪಿಂಡಪ್ರದಾನ ವಿಶೇಷ ಪೂಜೆ ನಡೆಸಿದರು.
ಬುಧವಾರ ಮುಂಜಾನೆ ಸುರಿದ ಭಾರಿ ಮಳೆಯಿಂದ ಹೆಜಮಾಡಿ ಸಮುದ್ರತೀರಕ್ಕೆ ಧಾರ್ಮಿಕ ವಿಧಿಗಳನ್ನು ಪೂರೈಸಲು ಆಗಮಿಸಿದ ಭಕ್ತರಿಗೆ ತೊಂದರೆ ಉಂಟಾಗಿ ಹೆಜಮಾಡಿ ಮುಟ್ಟಳಿವೆ ಸೇತುವೆ ಕೆಳಭಾಗದಲ್ಲಿ ವೇದಮೂರ್ತಿ ಅನಂತರಾಮ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಈ ಸಂದರ್ಭ ವೇದಮೂರ್ತಿ ಅನಂತರಾಮ್ ಭಟ್ ಮಾತನಾಡಿ ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ ಅಮಾವಾಸ್ಯೆ. ಹಿರಿಯರು ನಮ್ಮನ್ನು ಬಿಟ್ಟು ಭೌತಿಕವಾಗಿ ದೂರವಾದರೂ ಅವರನ್ನು ನೆನಪಿಸಿಕೊಂಡು ಗೌರವ ಸಲ್ಲಿಸುವ ಪದ್ದತಿ ಭಾರತೀಯ ಪರಂಪರೆಯಲ್ಲಿದೆ. ಪಿತೃದೇವತೆಗಳ ಆರ್ಶೀವಾದದಿಂದಲೇ ಸಂತಾನ, ಸುಖ, ಧನಲಾಭಗಳು ಉಂಟಾಗುತ್ತವೆ. ಅವರಿಗೆ ನೀಡುವ ತರ್ಪಣದಿಂದ ಸಂತೃಪ್ತರಾಗಿ ನಮ್ಮನು ಹರಸುತ್ತಾರೆ.
ಕೆಲವು ಸಮುದಾಯದಲ್ಲಿ ಶಾಸೋಕ್ತ ರೀತಿಯಲ್ಲಿ ಶ್ರಾದ್ಧ ಮಾಡಿದರೆ ಇನ್ನು ಕೆಲವರು ಅಗಲಿದ ಹಿರಿಯರಿಗೆ ಪ್ರಿಯವಾದ ತಿನಿಸು ‘ಎಡೆ’ ಇಟ್ಟು ಗೌರವಿಸುತ್ತಾರೆ. ಎಳ್ಳು ಹಬ್ಬವೆಂದು ಇದನ್ನು ಕರೆಯಲಾಗುತ್ತದೆ. ಮಾತೃದೇವೋಭವ , ಪಿತೃದೇವೋಭವ ಎಂದು ಪಠಿಸಿದರಷ್ಟೆ ಸಾಲದು, ಆ ಭಾವ ನಮ್ಮೊಳಗೆ ಹಾಸುಹೊಕ್ಕಾಗಬೇಕು ಎಂದರು.
ಮುಲ್ಕಿ ಪರಿಸರದ ಹೆಜಮಾಡಿ, ಪಲಿಮಾರು, ಮೂಡಬಿದ್ರೆ, ಬೆಳ್ಮಣ್ಣು, ಕಿನ್ನಿಗೋಳಿ, ಕಾರ್ಕಳ, ಶಿರ್ವ,ಇನ್ನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸಿ ಸಮುದ್ರಸ್ನಾನ ಹಾಗೂ ಇನ್ನಿತರ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದರು.
Kshetra Samachara
06/10/2021 01:50 pm