ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣ ಅಂಗಾರಕ ಚತುರ್ದಶಿ : ಸಾವಿರಾರು ಭಕ್ತರಿಂದ ಪುಣ್ಯಸ್ನಾನ!

ಉಡುಪಿ: ನದಿಗಳಲ್ಲಿ ಕೈಗೊಳ್ಳುವ ಪುಣ್ಯಸ್ನಾನಕ್ಕೆ ನಮ್ಮ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಇಂದು ಕೃಷ್ಣ ಅಂಗಾರಕ ಚತುರ್ದಶಿ. ಕರಾವಳಿ ಜಿಲ್ಲೆ ಉಡುಪಿಯ ಜೀವನದಿ ಸ್ವರ್ಣೆಯಲ್ಲಿ ಇಂದು ಪುಣ್ಯಸ್ನಾನ ಕೈಗೊಳ್ಳಲು ಸಾವಿರಾರು ಜನ ಬಂದಿದ್ದರು.

ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖಿತವಾದ ಕೆಲವೊಂದು ನದಿಗಳಿಗೆ ನಮ್ಮ ಪರಂಪರೆಯಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಉಡುಪಿಗೆ ನೀರುಣಿಸುವ ಸ್ವರ್ಣಾ ನದಿಗೂ ಶಾಸ್ತ್ರಗಳಲ್ಲಿ ಮಹತ್ವ ಕಲ್ಪಿಸಲಾಗಿದೆ. ವೇದಾಚಲ ಪರ್ವತದಲ್ಲಿ ಹುಟ್ಟುವ ಈ ನದಿಯ ಬಗ್ಗೆ ನಾಲ್ಕು ಶತಮಾನಗಳ ಹಿಂದೆ ವಾದಿರಾಜ ಗುರು ಸಾರ್ವಭೌಮರು ಉಲ್ಲೇಖಿಸಿದ್ದರು. ಅವರು ಬರೆದ ತೀರ್ಥಪ್ರಬಂಧ ದಲ್ಲಿ ಸ್ವರ್ಣ ನದಿಯಲ್ಲಿ ಪುಣ್ಯಸ್ನಾನ ಕೈಗೊಳ್ಳುವ ಬಗ್ಗೆ ಬರೆಯಲಾಗಿದೆ. ಶತಶತಮಾನಗಳು ಕಳೆದರೂ ಜನರ ನಂಬಿಕೆ ಮಾತ್ರ ದೃಢವಾಗಿದೆ. ಇಂದು ಕೃಷ್ಣ ಅಂಗಾರಕ ಚತುರ್ದಶಿಯ ದಿನ, ಇವತ್ತು ಹರಿಯುವ ನೀರಲ್ಲಿ ಮುಳುಗಿ ಪುಣ್ಯಸ್ಥಾನ ಕೈಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದಿದ್ದರು. ಮಣಿಪಾಲ ಸಮೀಪ ಇರುವ ಶೀಂಭ್ರ ಕ್ಷೇತ್ರದಲ್ಲಿ ಅಷ್ಟಮಠದ ಯತಿಗಳು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಬಂದ ಭಕ್ತರು ಪುಣ್ಯಸ್ನಾನ ಕೈಗೊಂಡರು.

ಕೃಷ್ಣಪಕ್ಷ- ಚತುರ್ದಶಿ ತಿಥಿ -ಹಾಗೂ ಮಂಗಳವಾರದ ದಿನವನ್ನು ಕೃಷ್ಣ ಅಂಗಾರಕ ಚತುರ್ದಶಿ ಎಂದು ಪರಿಗಣಿಸಿ ವರ್ಷಂಪ್ರತಿ ಪುಣ್ಯಸ್ನಾನ ಕೈಗೊಳ್ಳಲಾಗುತ್ತದೆ. ಇಲ್ಲಿನ ಗಣಪತಿ ಸನ್ನಿಧಾನಕ್ಕೆ ಸಾವಿರಾರು ಜನ ಭೇಟಿ ನೀಡಿ ಪುಣ್ಯ ಸ್ನಾನ ಮಾಡುತ್ತಾರೆ. ಈ ದಿನ ಸ್ವರ್ಣಾ ನದಿಯಲ್ಲಿ ಮುಳುಗಿದಾಗ ಒಂದು ವಿಶಿಷ್ಟವಾದ ಶಬ್ದ ಕೇಳುತ್ತೆ ಅನ್ನೋದು ಜನರ ನಂಬಿಕೆ. ವಾದಿರಾಜ ಗುರುಗಳು ತಿಳಿಸಿದಂತೆ ನೀರಿನಲ್ಲಿ ಮುಳುಗಿದ ಸಂದರ್ಭ ಚಟಚಟ ಎಂಬ ಶಬ್ದ ಕಿವಿಗೆ ಬೀಳುತ್ತಂತೆ, ಈ ಶಬ್ದ ಕೇಳಿದರೆ ನಮ್ಮ ಪಾಪಗಳೆಲ್ಲವೂ ಪರಿಹಾರವಾಗುತ್ತಂತೆ. ಕೃಷ್ಣ ಅಂಗಾರಕ ಚತುರ್ದಶಿಯಂದೇ ಈ ವಿದ್ಯಮಾನ ನಡೆಯುವುದರಿಂದ ಪುಣ್ಯಸ್ನಾನಕ್ಕೆ ವಿಶೇಷ ಮಹತ್ವ ಇದೆ. ಕರಾವಳಿ ಮಾತ್ರವಲ್ಲದೆ ಬೆಂಗಳೂರು ರಾಯಚೂರು ಬಳ್ಳಾರಿ ಮುಂತಾದ ಭಾಗಗಳಿಂದಲೂ ಜನ ಸ್ವರ್ಣ ನದಿಯಲ್ಲಿ ಪುಣ್ಯಸ್ನಾನ ಕೈಗೊಳ್ಳಲು ಬರುತ್ತಾರೆ.

ಉಡುಪಿ ಕೃಷ್ಣ ದೇವರಿಗೆ ಲಕ್ಷಾಂತರ ಭಕ್ತರಿದ್ದಾರೆ. ವಾದಿರಾಜ ಗುರು ಸಾರ್ವಭೌಮರನ್ನು ಪ್ರಾತಸ್ಮರಣೀಯರು ಎಂದು ಪೂಜಿಸುವ ಜನರಿದ್ದಾರೆ. ಇವರೆಲ್ಲರಿಗೂ ಕೃಷ್ಣ ಅಂಗಾರಕ ಚತುರ್ದಶಿ ಮಹತ್ವದ ದಿನವಾಗಿದೆ.

Edited By : Manjunath H D
Kshetra Samachara

Kshetra Samachara

05/10/2021 06:16 pm

Cinque Terre

9.77 K

Cinque Terre

0

ಸಂಬಂಧಿತ ಸುದ್ದಿ