ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸಂದೇಶವನ್ನು ದೇಶಾದ್ಯಂತ ಪ್ರಚಾರ ಮಾಡುವುದರ ಜೊತೆಗೆ ಇಡೀ ಜಗತ್ತಿನಲ್ಲಿ ಹರಡಿರುವ ಕೊರೊನಾ ಮಹಾಮಾರಿ ವಿರುದ್ಧ ತಿಳುವಳಿಕೆ ಮೂಡಿಸಲು ಕಾಸರಗೋಡಿನ ಮೂವರು ಯುವಕರು ಉತ್ತರಾಖಂಡ್‌ನಿಂದ ಇರುಮುಡಿ ಹೊತ್ತು ಶಬರಿಮಲೆ ಸನ್ನಿಧಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡಿನ ಕೂಡ್ಲು ಶ್ರೀ ವಿಷ್ಣುಮಂಗಲ ಕ್ಷೇತ್ರ ಸಮೀಪದ ಸನತ್ ಕುಮಾರ್ ನಾಯಕ್, ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಬಳಿಯ ಪ್ರಶಾಂತ್, ಕೂಡ್ಲು ಮೀಪುಗುರಿಯ ಸಂಪತ್ ಕುಮಾರ್ ಶೆಟ್ಟಿ ಎಂಬವರು ಸೆ.3ರಂದು ಉತ್ತರಾಖಂಡ್‌ನ ಪ್ರಸಿದ್ಧ ಬದರಿನಾಥ ಕ್ಷೇತ್ರದಲ್ಲಿ ಇರುಮುಡಿ ಕಟ್ಟು ತುಂಬಿಸಿ ಯಾತ್ರೆ ಆರಂಭಿಸಿದ್ದಾರೆ.
ಚಿಕ್ಕಂದಿನಿಂದಲೇ ಅಯ್ಯಪ್ಪ ಭಕ್ತರಾಗಿರುವ ಮೂವರು ಕಳೆದ ತಿಂಗಳ 27ರಂದು ರೈಲು ಮೂಲಕ ಕಾಸರಗೋಡಿನಿಂದ ಬದರೀನಾಥಕ್ಕೆ ಪ್ರಯಾಣ ಹೊರಟಿದ್ದರು. ಸೆ.1ರಂದು ಬದರೀನಾಥಕ್ಕೆ ತಲುಪಿದ ಅವರು 3ನೇ ತಾರೀಕು ಅಲ್ಲಿಯೇ ಇರುಮುಡಿಕಟ್ಟು ತುಂಬಿ ಶರಣಂ ಘೋಷಣೆಯೊಂದಿಗೆ ತೀರ್ಥಾಟನೆಗೆ ಚಾಲನೆ ನೀಡಿದರು.
ಬದರೀನಾಥದಿಂದ ಶಬರಿಮಲೆಗೆ 3,500 ಕಿ.ಮೀ ದೂರವಿದೆ. ಪ್ರತಿದಿನ 35 ಕಿ.ಮೀ ಎಂಬ ರೀತಿಯಲ್ಲಿ ಪ್ರಯಾಣಿಸುವುದು ಗುರಿಯಾಗಿದೆ. ಕ್ಷೇತ್ರಗಳ, ಬೆಟ್ಟಗಳು, ಹಿಮದ ನಾಡಾದ ಉತ್ತರಾಖಂಡ್‌ನಲ್ಲಿ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಪ್ರಯಾಣ ಕೊನೆಗೊಳಿಸಲಾಗುತ್ತಿದೆ. ಇದುವರೆಗೆ 470 ಕಿ.ಮೀ ಪ್ರಯಾಣ ನಡೆಸಿದ್ದು ಇನ್ನು 170 ಕಿ.ಮೀ ಕ್ರಮಿಸಿದರೆ ಉತ್ತರಾಂಖಂಡ್ ರಾಜ್ಯದಿಂದ ಉತ್ತರಪ್ರದೇಶಕ್ಕೆ ತಲುಪಬಹುದಾಗಿದೆ. ಆನಂತರ ರಾಜಸ್ಥಾನ ಅಲ್ಲಿಂದ ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕಕ್ಕೆ ತಲುಪಬಹುದಾಗಿದೆ. ಡಿಸೆಂಬರ್ 19ರಂದು ಮಂಗಳೂರಿಗೆ ತಲುಪುವ ರೀತಿಯಲ್ಲಿ ಪ್ರಯಾಣ ಮುಂದುವರಿಯುತ್ತದೆ. ಆನಂತರ ಕಾಸರಗೋಡಿನಿಂದ ತೆರಳುವ ಪಾದಯಾತ್ರೆ ತೀರ್ಥಾಟನೆ ತಂಡದೊಂದಿಗೆ ಮಕರಜ್ಯೋತಿಗೆ ಶಬರಿಮಲೆಗೆ ತಲುಪಲಿದ್ದಾರೆ.
ಭಾರತದ ಹಿರಿಮೆಯನ್ನು ತಿಳಿದುಕೊಂಡು ಅದನ್ನು ಸಮಾಜಕ್ಕೆ ಸಮರ್ಪಿಸಲಿರುವ ತೀರ್ಥಾಟನೆ ಕೂಡಾ ಇದಾಗಿದೆಯೆಂದು ಸನತ್ ಕಾಮಾರ್ ತಿಳಿಸಿದ್ದಾರೆ. ಮನುಷ್ಯರು-ಭಕ್ತಿ ಮಧ್ಯೆ, ಮನುಷ್ಯರು ಪ್ರಕೃತಿ ಮಧ್ಯೆ ಹಾಗೂ ಮನುಷ್ಯರು ಪ್ರಪಂಚದ ಮಧ್ಯದ ಸಂಬಂಧವನ್ನು ಖಚಿತಪಡಿಸಲಿರುವ ಪ್ರಯತ್ನವನ್ನು ಈ ತೀರ್ಥಾಟನೆ ಮೂಲಕ ಗುರಿಯಿರಿಸಲಾಗಿದೆ.
Kshetra Samachara
11/09/2021 08:39 pm