ಉಡುಪಿ: ನಾಗದೇವರ ನಾಡು ಎಂದೇ ಪ್ರಖ್ಯಾತವಾದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಪ್ರತೀವರ್ಷ ಅತ್ಯಂತ ಶೃದ್ಧಾಭಕ್ತಿಯಿಂದ ನಾಗರಪಂಚಮಿ ಆಚರಿಸಲಾಗುತ್ತದೆ. ಈ ಬಾರಿ ಕೋವಿಡ್ ನಿಯಮಾವಳಿಗಳ ಕಾರಣಕ್ಕೆ ವೈಭವದ ಆಚರಣೆ ನಡೆಯಲಿಲ್ಲ. ಆದರೆ ಪ್ರತಿಯೊಬ್ಬರೂ ಮೂಲ ನಾಗರ ದೇವರಿಗೆ ತನು ಅರ್ಪಿಸವುದು ಖಡ್ಡಾಯ, ಈ ಬಾರಿಯೂ ಜನರು ತಮ್ಮ ಮೂಲ ನಾಗನ ಸನ್ನಿಧಿಗೆ ಹೋಗಿ ನಾಗ ದೇವರಿಗೆ ತನು ಅರ್ಪಿಸಿ ಬಂದರು.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.ಇವತ್ತು ಮೊದಲ ಹಬ್ಬ ನಾಗರಪಂಚಮಿ ಸಂಭ್ರಮ. ಜಿಲ್ಲೆಯ ಸಾವಿರಾರು ನಾಗಬನಗಳಲ್ಲಿ ಜನಸಂದಣಿ ಇತ್ತಾದರೂ, ಕೋವಿಡ್ ನಿಯಮಾವಳಿ ಪಾಲನೆಗೂ ಒತ್ತು ನೀಡಲಾಗಿತ್ತು. ಕಳೆದ ಬಾರಿ ಜಿಲ್ಲಾಡಳಿತ ಸಾರ್ವಜನಿಕ ಆಚರಣೆಗೆ ಕಡಿವಾಣ ಹೇರಿ, ಆದೇಶ ಮಾಡಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಆದೇಶ ಇರಲಿಲ್ಲ. ಹಾಗಾಗಿ ಸಾರ್ವಜನಿಕ ದೇವಾಲಯಗಳಿಗೂ ಭಕ್ತರು ಬಂದಿದ್ದರು. ಮನೆಯ ನಾಗನಿಗೆ ಪೂಜೆ ಸಲ್ಲಿಸೋದು ಉಡುಪಿ ನಾಗರ ಪಂಚಮಿಯ ವಿಶೇಷ. ಕುಟುಂಬದ ಬನಗಳಲ್ಲಿ ಇಂದು ಮುಂಜಾನೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ನಾಗ ,ಫಲವನ್ನು ನೀಡುವ ದೇವರು ಎಂಬುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗ ದೇವರ ಆರಾಧನೆ ನಮ್ಮಲ್ಲಿ ಬಹಳ ಜನಪ್ರಿಯ. ನಮ್ಮ ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಧರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ.ಈ ಹಿನ್ನೆಲೆಯಲ್ಲಿ ಭಕ್ತರು ಮುಂಜಾನೆಯಿಂದಲೇ ನಾಗಬನಗಳಿಗೆ ಬಂದು ಶ್ರದ್ಧೆಯಿಂದ ಪೂಜೆಯಲ್ಲಿ ಪಾಲ್ಗೊಂಡರು.
ನಾಗದೇವರ ಆರಾಧನೆ ಹಲವು ಭಾಗಗಳಲ್ಲಿ ಹಲವು ವಿಧಗಳಲ್ಲಿ ನಡೆಯುತ್ತವೆ.ದಕ್ಷಿಣ ಕನ್ನಡದ ಹೆಚ್ಚಿನ ಮನೆಗಳಲ್ಲಿ ನಾಗಬನವಿರುತ್ತದೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವಿದೆ.ಉಡುಪಿಯಲ್ಲೂ ಹೆಚ್ಚುಕಡಿಮೆ ದಕ್ಷಿಣಕನ್ನಡದ ಸಂಪ್ರದಾಯವನ್ನೇ ಪಾಲಿಸಲಾಗುತ್ತದೆ.
Kshetra Samachara
13/08/2021 04:20 pm