ಮುಲ್ಕಿ: ಇಲ್ಲಿಗೆ ಸಮೀಪದ ಮಾನಂಪಾಡಿ ಶ್ರೀ ವೀರಭದ್ರ, ಶ್ರೀ ಮಹಮ್ಮಾಯಿ, ಶ್ರೀ ಗಣಪತಿ, ಶ್ರೀ ನಾಗದೇವರ ಹಾಗೂ ಶ್ರೀ ಧೂಮಾವತಿ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಭಾನುವಾರ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ದೇವತಾ ಪ್ರಾರ್ಥನೆ ನಡೆದು ಶ್ರೀ ಮಹಮ್ಮಾಯಿ ಸನ್ನಿಧಿಯಲ್ಲಿ ಪಂಚ ವಿಂಶತಿ ಕಲಾಶಾಧಿವಾಸ, ಅಧಿವಾಸ ಹೋಮ ನಡೆದು, ದೇವರಿಗೆ ಕಲಶಾಭಿಷೇಕ ನಡೆಯಿತು. ಬಳಿಕ ಮಹಾಪೂಜೆ, ಪರಿವಾರ ಸಾನಿಧ್ಯ ಗಳಿಗೆ ಕಲಶಾಭಿಷೇಕ, ಪುರಸ್ಸರ ಪರ್ವ ಪೂಜೆ ನಡೆಯಿತು. ನಂತರ ಸಾಮೂಹಿಕ ಶನಿಶಾಂತಿ ಯಾಗ ಪ್ರಾರಂಭವಾಗಿ ನಾಗ ಸನ್ನಿಧಿಯಲ್ಲಿ ನವಕ ಪ್ರಧಾನ ಆಶ್ಲೇಷ ಬಲಿ ನಡೆಯಿತು.
ಮಧ್ಯಾಹ್ನ 11 ಗಂಟೆಗೆ ನಾಗದರ್ಶನ, ವಟು ಆರಾಧನೆ, ಮಹಾಪೂಜೆ, ಶ್ರೀ ಗಣಪತಿ, ಶ್ರೀ ವೀರಭದ್ರ ಶ್ರೀ ಧೂಮಾವತಿ ಸನ್ನಿಧಿಯಲ್ಲಿ ಸಾನಿಧ್ಯ ಕಲಶ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಶ್ರೀ ಚಕ್ರ ಮಂಡಲ ರಚನೆ ನಡೆಯಿತು. 12.30ಕ್ಕೆ ಮಹಾ ಅನ್ನ ಸಂತರ್ಪಣೆ ಜರುಗಿತು.
ಸಂಜೆ 4 ಗಂಟೆಯಿಂದ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಶ್ರೀಚಕ್ರ ಪೂಜೆ ಪ್ರಾರಂಭವಾಗಿ 7 ಗಂಟೆಗೆ ಮಹಾಪೂಜೆ ನಡೆಯಿತು. ಶ್ರೀ ವೀರಭದ್ರ ದೇವರಿಗೆ ರಂಗಪೂಜೆ ಬಳಿಕ ಕನ್ನಿಕಾ ಪೂಜೆ, ವಟು ಪೂಜೆ ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ಬಳಿಕ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ಆಡಳಿತ ಮೊಕ್ತೇಸರ ಪುರಂದರ ಡಿ. ಶೆಟ್ಟಿಗಾರ್ ಮಾತನಾಡಿ, ಕ್ಷೇತ್ರದ ವರ್ಷಾವಧಿ ಮಹೋತ್ಸವ ಹಾಗೂ ಶ್ರೀ ಮಹಮ್ಮಾಯಿ ಸನ್ನಿಧಿಯಲ್ಲಿ ಚಂಡಿಕಾ ಯಾಗ ಮಾ. 23ರಂದು ಮಂಗಳವಾರ ನಡೆಯಲಿದೆ ಎಂದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರಧಾನ ಅರ್ಚಕ ವೇದಮೂರ್ತಿ ಎಸ್. ಅನಂತಮೂರ್ತಿ ಭಟ್, ಕ್ಷೇತ್ರದ ಗುರಿಕಾರರಾದ ಚಂದಪ್ಪ ಗುರಿಕಾರ್ ಮುಲ್ಕಿ, ಸದಾಶಿವ ಗುರಿಕಾರ್ ಸಾಣೂರು, ರುಕ್ಮಯ ಗುರಿಕಾರ್ ಕಡಂದಲೆ, ಕಾರ್ಯದರ್ಶಿ ಪಾಂಡುರಂಗ ಶೆಟ್ಟಿಗಾರ್ ಭಂಡಾರ ಮನೆ, ಮೊಕ್ತೇಸರರು, ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
01/03/2021 10:57 am