ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಶ್ರೀ ದುರ್ಗಾಪರಮೇಶ್ವರಿ ಬಪ್ಪನಾಡು ದೇವಸ್ಥಾನದಲ್ಲಿ ಒಂಬತ್ತು ಮಾಗಣೆಯ ಭಕ್ತರ ಸಭೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ನೇತೃತ್ವದಲ್ಲಿನಡೆಯಿತು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಮಾತನಾಡಿ, ಬಪ್ಪನಾಡು ಶ್ರೀ ದುರ್ಗಾ ಮಾತೆಯ ಸನ್ನಿಧಾನದಲ್ಲಿ ಮಾರ್ಚ್ 2018 ರಂದು ಬ್ರಹ್ಮಕಲಶೋತ್ಸವ ಹಾಗೂ ಅನೇಕ ಅಭಿವೃದ್ಧಿ ಕೆಲಸಗಳು ನೆರವೇರಿದ್ದು, ಬಳಿಕ ಫೆಬ್ರವರಿ 28 -2020 ರಂದು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಬಪ್ಪನಾಡು ದೇವಿಗೆ ಸ್ವರ್ಣ ಪಲ್ಲಕ್ಕಿಯ ಸಮರ್ಪಣೆ ನಡೆದಿತ್ತು. ಆದರೆ, ವಿಶ್ವಾದ್ಯಂತ ಪಸರಿಸಲ್ಪಟ್ಟ ಕೊರೊನಾ ವೈರಸ್ ನಿಂದಾಗಿ ಭಕ್ತರ ಸಭೆ ಕರೆಯಲು ಆಗಿರಲಿಲ್ಲ ಎಂದು ಹೇಳಿ ಶ್ರೀ ದೇವಿಗೆ ಅರ್ಪಿಸಿದ ಚಿನ್ನದ ಪಲ್ಲಕ್ಕಿಯ ಲೆಕ್ಕಪತ್ರ ಮಂಡಿಸಿದರು.
ಸತೀಶ್ ಭಂಡಾರಿ ದೇವಳದ ಲೆಕ್ಕಪತ್ರ ಮಂಡಿಸಿದರು. ಲೆಕ್ಕಪತ್ರದಲ್ಲಿ ಭಕ್ತಾದಿಗಳ ಕೆಲವು ಆಕ್ಷೇಪಗಳಿಗೆ ಉತ್ತರಿಸಿದ ಸಮಿತಿ ಸಂಚಾಲಕ ಅತುಲ್ ಕುಡ್ವ, ಲೆಕ್ಕ ಕೇಳುವುದು ಭಕ್ತರ ಜವಾಬ್ದಾರಿ. ದೇವಿ ಎದುರಿನಲ್ಲಿ ಎಲ್ಲವೂ ಪಾರದರ್ಶಕವಾಗಿದ್ದು, ಯಾವುದೇ ಲೆಕ್ಕಪತ್ರ ಕೊಡಲು ಸಿದ್ಧ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಮಾತನಾಡಿ ಚಿನ್ನದ ಪಲ್ಲಕ್ಕಿಯ ಲೆಕ್ಕಪತ್ರದಲ್ಲಿ ಸುಮಾರು 82 ಲಕ್ಷ ರೂ. ಉಳಿಕೆ ಯಾಗಿದ್ದು, ಮುಂದಿನ ದಿನಗಳಲ್ಲಿ ದೇವಳದ ಅಭಿವೃದ್ಧಿಗೆ ಚಿಂತನೆ ನಡೆಸಲಾಗುವುದು ಎಂದರು.
ದೇವಳದ ಜೀರ್ಣೋದ್ಧಾರ ಸಮಿತಿಯನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸಿದ್ದು, ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ವಿನಂತಿಸಿದರು. ಸಭೆಯ ಮೊದಲು ಬಪ್ಪನಾಡು ದೇವಳದ ದೇವರ ನಡೆಯಲ್ಲಿ ಲೆಕ್ಕಪತ್ರ ಇಟ್ಟು ಅರ್ಚಕ ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ,ಸಸಿಹಿತ್ಲು ಭಗವತಿ ಕ್ಷೇತ್ರದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಉಪಾಧ್ಯಕ್ಷ ಎಚ್. ವಿ. ಕೋಟ್ಯಾನ್, ಭುಜಂಗ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಉದಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/02/2021 05:49 pm