ಮುಲ್ಕಿ: ಮುಲ್ಕಿ ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಫೆ. 22ರಂದು ಸೋಮವಾರ ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಬೆಳಗ್ಗೆ ಚಂಡಿಕಾ ಯಾಗ ನಡೆಯಿತು. ಮಧ್ಯಾಹ್ನ ಮಹಾಪೂಜೆ, ದರ್ಶನ ಬಳಿಕ ಅನ್ನ ಸಂತರ್ಪಣೆ ಜರುಗಿತು. ಕ್ಷೇತ್ರದ ಅರ್ಚಕ ಶ್ರೀನಿವಾಸ ಐತಾಳ್ ಮಾತನಾಡಿ, ಶ್ರೀ ದುರ್ಗೆಯ ಆರಾಧನೆಯಿಂದ ಸರ್ವ ಕಷ್ಟಗಳ ನಿವಾರಣೆ ಸಾಧ್ಯ. ಜಾತ್ರಾ ಮಹೋತ್ಸವದ ಸಂದರ್ಭ ದೇವಿಯು ಲೋಕಕ್ಕೆ ಬಂದಿರುವ ಅನಿಷ್ಠ ಕೊರೊನಾ ಮಹಾಮಾರಿಯನ್ನು ದೂರವಾಗಿಸಿ, ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಚಂದ್ರಹಾಸ ಕೆ. ಅಮೀನ್ ಮಾತನಾಡಿ, ಫೆ. 22ರಂದು ಸಂಜೆ ಶ್ರೀ ಮೂಕಾಂಬಿಕಾ ದೇವಿ ಮತ್ತು ಶ್ರೀ ಜಾರಂದಾಯ ದೈವಗಳ ಭೇಟಿ ನಡೆಯಲಿದೆ ಹಾಗೂ ರಾತ್ರಿ ಶ್ರೀ ಜಾರಂದಾಯ ನೇಮೋತ್ಸವ ಜರುಗಲಿದೆ. ಫೆ.23ರಂದು ಮಧ್ಯಾಹ್ನ ಮಹಾಪೂಜೆ ಹಾಗೂ ಮಾರಿಪೂಜೆ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಪ್ರತಿ ಸಂಕಷ್ಟಹರ ಚತುರ್ಥಿಯಂದು ಸಾರ್ವಜನಿಕ ಸಂಕಷ್ಟಹರ ಗಣಹೋಮ ಜರುಗಲಿದೆ. ಪ್ರತಿ ತಿಂಗಳ ಸಂಕ್ರಮಣದಂದು ಶ್ರೀ ದುರ್ಗಾ ಹೋಮ, ತುಲಾಭಾರ ಮಹಾಪೂಜೆ, ದೇವಿ ದರ್ಶನ, ಅನ್ನ ಸಂತರ್ಪಣೆ ನಡೆಯಲಿದೆ ಎಂದರು.
ಈ ಸಂದರ್ಭ ದೇವಳದ ತಂತ್ರಿಗಳಾದ ಗೋಪಾಲಕೃಷ್ಣ ಭಟ್, ವಕೀಲ ಹಾಗೂ ನೋಟರಿ ಬಿಪಿನ್ ಪ್ರಸಾದ್, ಬಳ್ಕುಂಜೆ ಗ್ರಾಪಂ ಉಪಾಧ್ಯಕ್ಷ ಆನಂದ ಕೆ., ದಾನಿಗಳಾದ ಶ್ರಮಿಕ ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/02/2021 03:40 pm