ಕಾಸರಗೋಡು: ಜಗತ್ತಿನಲ್ಲಿಯೇ ಅತಿ ಎತ್ತರದ ಶಿವಲಿಂಗ ಆಕಾರದ ಮಹಾ ಮೃತ್ಯುಂಜಯ ದೇವಸ್ಥಾನವನ್ನು ಅಸ್ಸಾಂನ ನಾಗಾಂವ್‌ನ ಪುರಾನಿಗುಡಂನಲ್ಲಿ ನಿರ್ಮಿಸಲಾಗಿದೆ!
ಈ ದೇವಾಲಯದ ಪ್ರತಿಷ್ಠಾ ಸಮಾರಂಭ ಫೆ. 22 ರಿಂದ ಮಾರ್ಚ್ 3 ರ ವರೆಗೆ ನಡೆಯಲಿದ್ದು, ಕಾಸರಗೋಡಿನ ಪೆರಿಯಾ ನಿವಾಸಿ ಹಾಗೂ ಗೋಕುಲಂ ಗೋಶಾಲೆಯ ಮುಖ್ಯಸ್ಥ ವಿಷ್ಣು ಪ್ರಸಾದ್ ಹೆಬ್ಬಾರ್ ಪೂಚಕ್ಕಾಡ್ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ.
ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದ ಪ್ರಧಾನ ಅರ್ಚಕ, ನೀಲೇಶ್ವರ ಕಕ್ಕಟ್ಟಿಲ್ಲಮ್ ನ ವಿನೀತ್ ಪಟ್ಟೇರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ನರಸಿಂಹ ಅಡಿಗ ಮತ್ತಿತರರು ನೇತೃತ್ವ ವಹಿಸುತ್ತಾರೆ. 250 ಮಂದಿ ವೈದಿಕ ಶ್ರೇಷ್ಠರು ಪ್ರತಿಷ್ಠಾ ಕಾರ್ಯ ನಡೆಸಲು ಅಸ್ಸಾಂಗೆ ಈಗಾಗಲೇ ತೆರಳಿದ್ದಾರೆ.
136 ಅಡಿ ಎತ್ತರ, ಶಿವಲಿಂಗಾಕಾರದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಗುತ್ತದೆ.
ಈ ಸ್ಥಳದಲ್ಲಿಯೇ ಹಿರಣ್ಯಕಶಿಪು ತಪಸ್ಸು ಮಾಡಿರುವುದಾಗಿ ನಂಬಿಕೆಯಿದೆ. ಶತ ಚಂಡಿಕಾ ಹೋಮ, ಚತುರ್ವೇದ ಪಾರಾಯಣ, ದಶಲಕ್ಷ ಮೃತ್ಯುಂಜಯ ಜಪ, ಒಂದು ಲಕ್ಷ ಮಹಾ ಮೃತ್ಯುಂಜಯ ಹೋಮ, ಮಹಾರುದ್ರ, ಸಹಸ್ರ ಕಲಶಾಭಿಷೇಕ ಇತ್ಯಾದಿ ಕೇರಳೀಯ ಪದ್ಧತಿಯ ಧಾರ್ಮಿಕ ವಿಧಿವಿಧಾನದಂತೆ ಜರುಗಲಿವೆ.
ವಿಷ್ಣು ಹೆಬ್ಬಾರ್ 10 ವರ್ಷಗಳಿಂದ ಅಸ್ಸಾಂ ವಿತ್ತ ಸಚಿವ ಹೇಮಂತ ವಿಶ್ವಶರ್ಮ ಅವರ ಆಧ್ಯಾತ್ಮಿಕ ಗುರು ಹಾಗೂ ಜ್ಯೋತಿಷಿಗಳಾಗಿದ್ದಾರೆ. ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಈ ಪ್ರತಿಷ್ಠಾ ಕಾರ್ಯಗಳಿಗೆ ನೇತೃತ್ವ ವಹಿಸಲಿದೆ.
ಕೇರಳೀಯ ಚೆಂಡೆ ಮೇಳ, ಪಂಚ ವಾದ್ಯ, ಸೋಪಾನ ಸಂಗೀತ ಇವೆಲ್ಲ ಉತ್ಸವದಲ್ಲಿ ತನುಮನ ತಣಿಸಲಿವೆ. ಫೆ. 27ರಂದು ಪ್ರತಿಷ್ಠಾ ಮಹೋತ್ಸವ ಜರುಗಲಿದ್ದು, ಈ ಸಂದರ್ಭ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನ ನಡೆಯಲಿದೆ.
Kshetra Samachara
20/02/2021 08:36 pm