ಕಡಬ: ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷದ ಕ್ರಿಸ್‍ಮಸ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುತ್ತಿದೆ.
ಈ ಬಾರಿ ಮಂಗಳೂರು, ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಸಾಮಾನ್ಯ ಎಲ್ಲ ಚರ್ಚ್ ಗಳಲ್ಲಿ ಸಂಜೆ 4:30ರಿಂದ ರಾತ್ರಿ 10:30ರೊಳಗೆ ಕ್ರಿಸ್ಮಸ್ ಪ್ರಾರ್ಥನೆ ಮುಗಿಸಿ ಜನರು ಮನೆಗಳಿಗೆ ತೆರಳುವ ದೃಶ್ಯ ನಿನ್ನೆ ಕಂಡುಬಂದಿತ್ತು.
ಮಂಗಳೂರು, ಪುತ್ತೂರು, ಬೆಳ್ತಂಗಡಿ ಧರ್ಮಪ್ರಾಂತ್ಯಗಳ ವಂದನೀಯ ಬಿಷಪ್ ಅವರು ಹಾಗೂ ಆಯಾ ಚರ್ಚುಗಳ ಧರ್ಮಗುರುಗಳು ಕ್ರಿಸ್ಮಸ್ ಪೂಜಾವಿಧಿಗಳಿಗೆ ನೇತೃತ್ವ ವಹಿಸಿದ್ದರು.
ಅತಿ ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಧರ್ಮಾಧ್ಯಕ್ಷರು, ಮಲಂಕರ ಧರ್ಮಪ್ರಾಂತ್ಯ, ಪುತ್ತೂರು ಅವರು ಕ್ರಿಸ್ಮಸ್ ಸಂದೇಶ ನೀಡಿದರು.
ಸಾಮಾನ್ಯವಾಗಿ ಡಿ.24ರಂದೇ ಮಧ್ಯರಾತ್ರಿ ಕ್ರಿಸ್ಮಸ್ ಪ್ರಾರ್ಥನೆ ನಡೆಸಲಾಗುತ್ತದೆ. ಜನರು ಚರ್ಚ್ ಗಳಲ್ಲಿ ಬಹಳ ಸಮಯ ತೆಗೆದುಕೊಳ್ಳುವ ಮೂಲಕ ಸಲ್ಲಿಸುತ್ತಿದ್ದ ಪ್ರಾರ್ಥನೆಗಳನ್ನು ಈ ವರ್ಷ ಸರಳ, ಸಾಂಕೇತಿಕವಾಗಿ ನಡೆಸಲಾಯಿತು.
ಚರ್ಚ್ ಗಳಲ್ಲಿ ಏಸುಕ್ರಿಸ್ತನ ಜನನ ಸಂದೇಶ ಸಾರುವ ಗೋದಲಿ ನಿರ್ಮಿಸಲಾಗಿತ್ತು. ಕ್ರಿಸ್ಮಸ್ ಕ್ಯಾರೋಲ್ ಹಾಡು ಮೂಲಕ ಮನೆ- ಮನೆಗೆ ಸಂದೇಶ ಸಾರುವ ಕಾರ್ಯಕ್ರಮ ಮತ್ತು ಹಲವು ಕಡೆ ಆಚರಿಸುವ ಸಂಯುಕ್ತ ಕ್ರಿಸ್ಮಸ್ ಆಚರಣೆ ಇರಲಿಲ್ಲ.
ಎಲ್ಲ ಚರ್ಚ್ ಗಳಲ್ಲಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯವಾಗಿತ್ತು.
Kshetra Samachara
25/12/2020 11:57 am